ದಕ್ಷಿಣ ಕನ್ನಡ

​ಮಂಗಳೂರು : ಪ್ರೀತಿ ಹೆಸರಲ್ಲಿ ವಂಚಿಸಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್!

 


ಮಂಗಳೂರು:ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಗೆ ಮಂಗಳೂರಿನ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

​ಕುಂಜತ್ತಬೈಲು ದೇವಿನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹಾ (20) ಶಿಕ್ಷೆಗೆ ಗುರಿಯಾದ ಅಪರಾಧಿ. ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಸುದೀರ್ಘ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?

​2024ರ ಫೆಬ್ರವರಿ ಅವಧಿಯಲ್ಲಿ ಆರೋಪಿ ಸೋನು, ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿದ್ದ. ಬಳಿಕ ಆಕೆಯನ್ನು ನಂಬಿಸಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಷ್ಟಕ್ಕೇ ನಿಲ್ಲಿಸದ ಈತ, ಬಾಲಕಿ ಸ್ನಾನದ ಗೃಹದಲ್ಲಿದ್ದಾಗ ವೀಡಿಯೊ ಕಾಲ್ ಮಾಡಿ, ಅದನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ತನ್ನ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದ.

​ನಂತರ ಈ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಬಾಲಕಿಯನ್ನು ದೈಹಿಕ ಸಂಪರ್ಕಕ್ಕೆ ಒಪ್ಪಿಸುವಂತೆ ನಿರಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ವಿಷಯವನ್ನು ಹೊರಗೆ ತಿಳಿಸಿದರೆ ಬಾಲಕಿ ಸೇರಿದಂತೆ ಆಕೆಯ ತಾಯಿ ಮತ್ತು ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ಪೊಲೀಸ್ ತನಿಖೆ ಮತ್ತು ನ್ಯಾಯಾಲಯದ ತೀರ್ಪು

​ಈ ಕುರಿತು ಸಂತ್ರಸ್ತೆಯ ಕಡೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಪ್ರಕರಣದ ವಿಸ್ತೃತ ತನಿಖೆ ನಡೆಸಿ, ಬಲವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

​ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪದ ತೀವ್ರತೆಯನ್ನು ಪರಿಗಣಿಸಿ ವಿವಿಧ ಕಾಯ್ದೆಗಳಡಿ ಈ ಕೆಳಗಿನಂತೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ:

  • ಮುಖ್ಯ ಅತ್ಯಾಚಾರ ಪ್ರಕರಣ: 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ.
  • BNS ಕಲಂ 77 (B) ಅಡಿ: 1 ವರ್ಷ ಜೈಲು ಶಿಕ್ಷೆ ಮತ್ತು ₹5,000 ದಂಡ.
  • ಪೋಕ್ಸೋ (POCSO) ಕಾಯ್ದೆ ಕಲಂ 15ರಡಿ: 1 ವರ್ಷ ಜೈಲು ಶಿಕ್ಷೆ ಮತ್ತು ₹5,000 ದಂಡ.
  • ಐಟಿ (IT) ಕಾಯ್ದೆ ಕಲಂ 66(E) ಅಡಿ: 1 ವರ್ಷ ಜೈಲು ಶಿಕ್ಷೆ ಮತ್ತು ₹5,000 ದಂಡ.

​ಆರೋಪಿ ಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಶಿಕ್ಷೆ ಕೊಡಿಸುವಲ್ಲಿ ಕಂಕನಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.



image