ಸುಬ್ರಹ್ಮಣ್ಯ:ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ‘ಯಶಸ್ವಿ’ ಶನಿವಾರ ತನ್ನ 22ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದೆ. 23ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ದೇವಳದ ಕಾಶಿಕಟ್ಟೆ ಶ್ರೀ ಮಹಾಗಣಪತಿ ಸ್ವಾಮಿಯ ಸನ್ನಿಧಿಯಲ್ಲಿ 'ಯಶಸ್ವಿ' ಹೆಸರಿನಲ್ಲಿ ವಿಶೇಷ ರಂಗಪೂಜೆ ನೆರವೇರಿಸಲಾಯಿತು.
3ನೇ ವಯಸ್ಸಿನಲ್ಲಿ ಕ್ಷೇತ್ರಕ್ಕೆ ಆಗಮನ
2004ರ ಜುಲೈ 18ರಂದು ಜನಿಸಿದ ಈ ಹೆಣ್ಣಾನೆಯನ್ನು, 2007ರ ಡಿಸೆಂಬರ್ 29ರಂದು ಬಳ್ಳಾರಿಯ ಆಗಿನ ಶಾಸಕ ಆನಂದ್ ಸಿಂಗ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾರೂಪದಲ್ಲಿ ಕಾಣಿಕೆಯಾಗಿ ನೀಡಿದ್ದರು. ಕ್ಷೇತ್ರಕ್ಕೆ ಬಂದಾಗ ಕೇವಲ 3 ವರ್ಷ ಪ್ರಾಯವಿದ್ದ ಈ ಆನೆಗೆ 'ಯಶಸ್ವಿ' ಎಂದು ನಾಮಕರಣ ಮಾಡಿ, ಸೂಕ್ತ ತರಬೇತಿ ನೀಡಲಾಗಿತ್ತು. ಆರಂಭದಲ್ಲಿ ದೇವಳದ ಹಿರಿಯ ಆನೆ 'ಇಂದುಮತಿ'ಯೊಂದಿಗೆ ಸೇವೆ ಸಲ್ಲಿಸುತ್ತಿದ್ದ ಯಶಸ್ವಿ, ಇಂದುಮತಿಯ ಅಗಲಿಕೆಯ ನಂತರ ದೇವಳದ ಮುಖ್ಯ ಆನೆಯಾಗಿ ಸುಬ್ರಹ್ಮಣ್ಯ ಸ್ವಾಮಿಯ ಸೇವೆ ಮುಂದುವರಿಸಿಕೊಂಡು ಬರುತ್ತಿದೆ.
ಭಕ್ತರ ಕಣ್ಮಣಿ ‘ಯಶಸ್ವಿ’ಯ ನಿತ್ಯ ಸೇವೆ
ಯಶಸ್ವಿ ಕ್ಷೇತ್ರದ ಭಕ್ತರಿಗೆ ಅತ್ಯಂತ ಪ್ರೀತಿಯ ಆನೆಯಾಗಿದೆ. ಪ್ರತಿದಿನ ಮುಂಜಾನೆ ನದಿಯಲ್ಲಿ ಸ್ನಾನ ಮುಗಿಸಿ, ಆಹಾರ ಸೇವಿಸಿದ ಬಳಿಕ ಮಧ್ಯಾಹ್ನ 11.45ರ ಸುಮಾರಿಗೆ ದೇವಳಕ್ಕೆ ಆಗಮಿಸುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿ ಎರಡು ಕಾಲನ್ನೂರಿ, ಸೊಂಡಿಲೆತ್ತಿ ಸುಬ್ರಹ್ಮಣ್ಯ ಸ್ವಾಮಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸುವುದು ಇದರ ದಿನಚರಿ.
- ಪೂಜಾ ಸಮಯದಲ್ಲಿ ಭಕ್ತಿ: ಮಹಾಪೂಜೆಯ ಸಂದರ್ಭದಲ್ಲಿ ತನ್ನ ಕೊರಳಿನಲ್ಲಿರುವ ಗಂಟೆಯನ್ನು ಸೊಂಡಿಲಿನಿಂದ ಬಾರಿಸುತ್ತಾ ಶ್ರದ್ಧೆಯಿಂದ ನಿಲ್ಲುತ್ತದೆ.
- ಉತ್ಸವಗಳಲ್ಲಿ ಭಾಗಿ: ದೇವಸ್ಥಾನದ ಜಾತ್ರೆ ಮತ್ತು ಉತ್ಸವಗಳ ಸಮಯದಲ್ಲಿ ಸ್ವಾಮಿಯ ಮುಂಭಾಗದಲ್ಲಿ ಚಾಮರ ಬೀಸುತ್ತಾ, ರಥೋತ್ಸವದ ಸಂಗೀತದ ನಾದಕ್ಕೆ ತಕ್ಕಂತೆ ನರ್ತಿಸುತ್ತಾ ಮುನ್ನಡೆಯುವುದು ಭಕ್ತರ ಕಣ್ಣಿಗೆ ಹಬ್ಬ.
- ಮಕ್ಕಳೆಂದರೆ ಪಂಚಪ್ರಾಣ: ಯಶಸ್ವಿಗೆ ಸಣ್ಣ ಮಕ್ಕಳ ಎಂದರೆ ಅಪಾರ ಪ್ರೀತಿ. ದರ್ಶನಕ್ಕೆ ಬರುವ ಭಕ್ತರ ತಲೆಯ ಮೇಲಿಟ್ಟು ಸೊಂಡಿಲಿನಿಂದ ಆಶೀರ್ವದಿಸುವ ದೃಶ್ಯ ಮನಮೋಹಕವಾಗಿರುತ್ತದೆ. ಮಧ್ಯಾಹ್ನದ ಪೂಜೆ ಮುಗಿದ ನಂತರ ಸ್ವಾಮಿಗೆ ನಮಸ್ಕರಿಸಿ 1 ಗಂಟೆಗೆ ತನ್ನ ಸ್ವಸ್ಥಾನಕ್ಕೆ ಹಿಂತಿರುಗುತ್ತದೆ.
ಪೌಷ್ಟಿಕ ಆಹಾರ ಕ್ರಮ
ಯಶಸ್ವಿಯ ಆರೋಗ್ಯಕ್ಕಾಗಿ ವಿಶೇಷ ಆಹಾರ ನೀಡಲಾಗುತ್ತದೆ. ಮುಂಜಾನೆ ರಾಗಿಮುದ್ದೆ, ಮಧ್ಯಾಹ್ನ ಕುಚ್ಚಲಕ್ಕಿ ಅನ್ನ ಹಾಗೂ ಹುರುಳಿ ಮಿಶ್ರಣದ ಆಹಾರ ನೀಡಿದರೆ, ರಾತ್ರಿ ತರಕಾರಿ ಮತ್ತು ವಿಧವಿಧದ ಸೊಪ್ಪುಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ರಾಗಿಮುದ್ದೆ, ಹೆಸರುಕಾಳು, ಕಡ್ಲೆ, ಬೈನೆ, ತಾಳೆಗರಿ, ಕಬ್ಬು ಹಾಗೂ ಬಿದಿರು ಯಶಸ್ವಿಯ ನೆಚ್ಚಿನ ಆಹಾರ.
ಧಾರ್ಮಿಕ ವಿಧಿವಿಧಾನದೊಂದಿಗೆ ಹುಟ್ಟುಹಬ್ಬ ಆಚರಣೆ
ಹುಟ್ಟುಹಬ್ಬದ ಅಂಗವಾಗಿ ಕಾಶಿಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ರಂಗಪೂಜೆ ನಡೆಯುತ್ತಿದ್ದಾಗ, ಯಶಸ್ವಿ ತನ್ನ ಕೊರಳ ಗಂಟೆಯನ್ನು ಬಾರಿಸುತ್ತಾ ಅತ್ಯಂತ ಭಕ್ತಿಯಿಂದ ನಿಂತಿತ್ತು. ಪೂಜೆಯ ಬಳಿಕ ಪುರೋಹಿತ ಪ್ರಸಾದ್ ಕಲ್ಲೂರಾಯ ಅವರು ಯಶಸ್ವಿಗೆ ಹೂಮಾಲೆ ಹಾಕಿ, ದೇವರ ಪ್ರಸಾದ ನೀಡಿದರು. ಆನೆ ಸೊಂಡಿಲೆತ್ತಿ ದೇವರಿಗೆ ವಂದಿಸಿತು.
ಯಶಸ್ವಿಯ 22ನೇ ಜನ್ಮದಿನದ ಪ್ರಯುಕ್ತ ಕ್ಷೇತ್ರದ ನೂರಾರು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.
