ದಕ್ಷಿಣ ಕನ್ನಡ

ಮಂಗಳೂರು : ಫೇಸ್‌ಬುಕ್‌ನಲ್ಲಿ 'ಯುಕಿಯ ಡಾಕ್ಟರ್' ಪರಿಚಯ: ₹2.67 ಲಕ್ಷ ಕಳೆದುಕೊಂಡ ಮಂಗಳೂರಿನ ಗೃಹಣಿ!

 


ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಷ್ಟೇ ಎಚ್ಚರವಹಿಸಿದರೂ ಸೈಬರ್ ಕ್ರಿಮಿನಲ್‌ಗಳು ಹೊಸ ಹೊಸ ತಂತ್ರಗಳ ಮೂಲಕ ಸಾರ್ವಜನಿಕರನ್ನು ಬಲೆಗೆ ಬೀಳಿಸುತ್ತಿದ್ದಾರೆ. ವಿದೇಶದಿಂದ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಂಗಳೂರಿನ 46 ವರ್ಷದ ಗೃಹಣಿಯೊಬ್ಬರಿಂದ ₹2.67 ಲಕ್ಷ ಹಣ ದೋಚಿರುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆಯ ವಿವರ:

​ಸಂತ್ರಸ್ತ ಮಹಿಳೆಗೆ ಸುಮಾರು ಎರಡು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ‘ಡಾ. ವಿಲಿಯಮ್ಸ್ ಹೆರ್ಬರ್ಟ್’ ಎಂಬ ಹೆಸರಿನ ನಕಲಿ ಖಾತೆಯಿಂದ ಮೆಸೇಜ್ ಬಂದಿತ್ತು. ತಾನು ಯುನೈಟೆಡ್ ಕಿಂಗ್‌ಡಮ್ (UK) ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ಆ ವ್ಯಕ್ತಿ, ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ನಿರಂತರವಾಗಿ ಮಾತನಾಡಿ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡಿದ್ದ.

​ಕಳೆದ ಜೂನ್ 28ರಂದು ಮಹಿಳೆಗೆ ಕರೆ ಮಾಡಿದ್ದ ಈತ, "ನಿಮಗಾಗಿ ಬೆಲೆಬಾಳುವ ಚಿನ್ನಾಭರಣ, ಬ್ರ್ಯಾಂಡೆಡ್ ಬ್ಯಾಗ್, ಚಾಕೊಲೇಟ್ ಹಾಗೂ ವಿದೇಶಿ ಹಣವಿರುವ ಪಾರ್ಸೆಲ್ ಕಳುಹಿಸಿದ್ದೇನೆ" ಎಂದು ನಂಬಿಸಿದ್ದ.

'ಕಸ್ಟಮ್ಸ್ ಅಧಿಕಾರಿ' ಹೆಸರಲ್ಲಿ ಬೆದರಿಕೆ:

​ಇದು ನಡೆದ ಮರುದಿನವೇ (ಜೂನ್ 29) ಅಪರಿಚಿತ ವ್ಯಕ್ತಿಯೊಬ್ಬ 'ಏರ್‌ಪೋರ್ಟ್ ಕಸ್ಟಮ್ಸ್ ಆಫೀಸರ್' ಎಂದು ಕರೆ ಮಾಡಿ, "ನಿಮ್ಮ ಹೆಸರಿಗೆ ಕಳುಹಿಸಲಾದ ಪಾರ್ಸೆಲ್ ಬಂದಿದೆ. ಅದನ್ನು ಕ್ಲಿಯರ್ ಮಾಡಲು 'ಲಗೇಜ್ ಚಾರ್ಜ್' ಪಾವತಿಸಬೇಕು" ಎಂದು ಸೂಚಿಸಿದ್ದ. ಇದನ್ನು ನಿಜವೆಂದು ನಂಬಿದ ಗೃಹಣಿ ಆರಂಭದಲ್ಲಿ ₹28,000 ಹಣವನ್ನು ಫೋನ್ ಪೇ ಮೂಲಕ ಪಾವತಿಸಿದ್ದರು.

​ಬಳಿಕ ಜೂನ್ 30ರಂದು ಮತ್ತೆ ಕರೆ ಮಾಡಿದ ವಂಚಕರು, "ಪಾರ್ಸೆಲ್‌ನಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ಜಪ್ತಿ (Seize) ಮಾಡಿದ್ದಾರೆ" ಎಂದು ಹೆದರಿಸಿದ್ದಾರೆ. ಕೇಸಿನ ಭಯ ಹುಟ್ಟಿಸಿ ವಿವಿಧ ಕಂತುಗಳಲ್ಲಿ ಗೃಹಣಿ ಹಾಗೂ ಅವರ ಸಂಬಂಧಿಕರ ಖಾತೆಯಿಂದ ಒಟ್ಟು ₹1.52 ಲಕ್ಷ ಪಡೆದುಕೊಂಡಿದ್ದಾರೆ.

ಪೆನಾಲ್ಟಿ ನೆಪದಲ್ಲಿ ಮತ್ತಷ್ಟು ವಂಚನೆ:

​ಇಷ್ಟಕ್ಕೇ ನಿಲ್ಲದ ಜಾಲ, ಜುಲೈ 8ರಂದು ಮತ್ತೊಂದು ನಂಬರ್‌ನಿಂದ ಕರೆ ಮಾಡಿ "ಪಾರ್ಸೆಲ್ ಸ್ವೀಕರಿಸಲು ತಡವಾಗಿದ್ದರಿಂದ ಪೆನಾಲ್ಟಿ ಪಾವತಿಸಬೇಕು" ಎಂದು ಹೇಳಿದೆ. ಜುಲೈ 9ರಂದು ಮಹಿಳೆ ಚೆಕ್ ಮೂಲಕ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ₹87,000 ವರ್ಗಾಯಿಸಿದ್ದಾರೆ.

​ಹಂತ ಹಂತವಾಗಿ ಒಟ್ಟು ₹2,67,000 ಪಡೆದ ಮೇಲೆಯೂ ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಗೃಹಣಿ ತಾವು ವಂಚನೆಗೊಳಗಾಗಿರುವುದನ್ನು ಅರಿತು ತಕ್ಷಣವೇ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.



image