ರಾಜ್ಯ

ಬೆಂಗಳೂರು:ಫುಟ್‌ಪಾತ್‌ ಮೇಲೆ ಬೈಕ್ ಓಡಿಸಿದರೆ 5,000 ರೂ. ದಂಡ!: ಸಾರಿಗೆ ಸಚಿವರಿಗೆ ಕೃಷ್ಣಬೈರೇಗೌಡ ಖಡಕ್ ಪತ್ರ

 


ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಪಾದಾಚಾರಿ ಮಾರ್ಗಗಳಲ್ಲಿ (ಫುಟ್‌ಪಾತ್) ದ್ವಿಚಕ್ರ ಸೇರಿದಂತೆ ಮೋಟಾರು ವಾಹನಗಳನ್ನು ಚಲಾಯಿಸುವ ಸವಾರರಿಗೆ ಕಟ್ಟುನಿಟ್ಟಿನ ಲಗಾಮು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವ ನಿಯಮಬಾಹಿರ ಕೃತ್ಯಕ್ಕೆ ವಿಧಿಸುವ ದಂಡದ ಮೊತ್ತವನ್ನು 5,000 ರೂಪಾಯಿಗಳಿಗೆ ಹೆಚ್ಚಳ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

​ಇತ್ತೀಚೆಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಸಚಿವರು, ನಗರದಲ್ಲಿ ಸಾರ್ವಜನಿಕರು ಹಾಗೂ ಪಾದಾಚಾರಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

​ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ನಂತರ ಖಾಲಿಯಾದ ಪಾದಾಚಾರಿ ಮಾರ್ಗಗಳಲ್ಲಿ ವಾಹನ ಸವಾರರು ಬೈಕ್ ಚಲಾಯಿಸುವುದು ಸಂಪೂರ್ಣ ಅಕ್ರಮ. ಇದು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತದೆ. ಇಂತಹ ಬೇಜವಾಬ್ದಾರಿ ಹಾಗೂ ಕಾನೂನುಬಾಹಿರ ನಡವಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

​ಪಾದಾಚಾರಿಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸೂಕ್ತ ಪಾಠ ಕಲಿಸಲು ಹಾಲಿ ಇರುವ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದು ಅತ್ಯಗತ್ಯ ಎಂದು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



image