ವಾರಣಾಸಿ: ಅಕ್ಷರ ಕಲಿಸಿ ಸಂಸ್ಕಾರ ನೀಡಬೇಕಾದ ಶಿಕ್ಷಕಿಯೊಬ್ಬಳು ತನ್ನ ರಾಕ್ಷಸೀಯ ಪ್ರವೃತ್ತಿ ಮೆರೆದ ಘಟನೆಯೊಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ತರಗತಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ ಐದು ವರ್ಷದ ಮಗುವಿನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟು ವಿಕೃತ ಆನಂದ ಪಟ್ಟಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆ:
ವಾರಣಾಸಿಯ ಆಕಥಾ ಪ್ರದೇಶದಲ್ಲಿರುವ 'ಸೆರೆನ್ ಸೋನಿ' ಪ್ಲೇ ಸ್ಕೂಲ್‌ನಲ್ಲಿ ಜುಲೈ 24 ರಂದು ಈ ಅಮಾನವೀಯ ಕೃತ್ಯ ಸಂಭವಿಸಿದೆ. ತರಗತಿಯಲ್ಲಿದ್ದ 5 ವರ್ಷದ ಬಾಲಕ ಶೌಚಾಲಯಕ್ಕೆ ಹೋಗಲು ಶಿಕ್ಷಕಿಯ ಬಳಿ ಅನುಮತಿ ಕೇಳಿದ್ದ. ಆದರೆ, ಶಿಕ್ಷಕಿ ಅನುಮತಿ ನೀಡಲು ನಿರಾಕರಿಸಿದ್ದಾಳೆ. ಪರಿಣಾಮವಾಗಿ, ತಡೆಯಲಾಗದೆ ಮಗು ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದೆ.
ಇದರಿಂದ ಆಕ್ರೋಶಗೊಂಡ ಶಿಕ್ಷಕಿ, ಮಗುವನ್ನು ಪಕ್ಕದ ಕೋಣೆಗೆ ಕರೆದೊಯ್ದು ಗ್ಯಾಸ್ ಸ್ಟೌವ್ ಮೇಲಿಟ್ಟು ಬಿಸಿ ಮಾಡಿದ ಚಾಕುವಿನಿಂದ ಬಾಲಕನ ಖಾಸಗಿ ಭಾಗಕ್ಕೆ ಸುಟ್ಟಿದ್ದಾಳೆ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾಳೆ.
ಪೋಷಕರಿಗೆ ಪ್ರಾಂಶುಪಾಲರ ಬೆದರಿಕೆ!
ಮನೆಗೆ ಹಿಂತಿರುಗಿದ ಮಗು ತೀವ್ರ ನೋವಿನಿಂದ ಕಣ್ಣೀರಿಡುತ್ತಾ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದೆ. ಗಾಬರಿಗೊಂಡ ಪೋಷಕರು ಶಾಲೆಯ ಪ್ರಾಂಶುಪಾಲೆ ಹೇಮಲತಾ ಸಿಂಗ್ ಅವರನ್ನು ಸಂಪರ್ಕಿಸಿ ನ್ಯಾಯ ಕೇಳಲು ಯತ್ನಿಸಿದ್ದಾರೆ. ಆದರೆ, ಪ್ರಾಂಶುಪಾಲೆ ಮತ್ತು ಶಾಲಾ ಆಡಳಿತ ಮಂಡಳಿ ಶಿಕ್ಷಕಿಯ ಪರ ವಹಿಸಿ ಪೋಷಕರಿಗೇ ಧಮಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ದೂರು - ಎಫ್‌ಐಆರ್ ದಾಖಲು:
ಮಗುವಿಗೆ ಉಂಟಾದ ಗಂಭೀರ ಗಾಯ ಹಾಗೂ ಮಾನಸಿಕ ಆಘಾತವನ್ನು ಕಂಡ ತಂದೆ ತಕ್ಷಣವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾಲ್‌ಪುರ್-ಪಾಂಡೇಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಅತುಲ್ ಸಿಂಗ್ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
