ದಕ್ಷಿಣ ಕನ್ನಡ

ಕಡಬ : ಕಡಬದಲ್ಲಿ ಪ್ರೇಮಿಗಳ ಜಟಾಪಟಿ: ಕೋಪದಲ್ಲಿ ಚರಂಡಿಗೆ ಕಾರಿನ ಕೀ ಎಸೆದ ಯುವತಿ, 5 ಗಂಟೆ ಹುಡುಕಾಡಿದ ಯುವಕ!

 


ಕಡಬ: ಸಣ್ಣ ವಿಷಯಕ್ಕೆ ಪ್ರೇಮಿಗಳ ನಡುವೆ ಉಂಟಾದ ಮಾತಿನ ಚಕಮಕಿ ಕೊನೆಗೆ ಯುವಕನೊಬ್ಬ ಗಂಟೆಗಟ್ಟಲೆ ಚರಂಡಿಯಲ್ಲಿ ಕಾರಿನ ಕೀ ಹುಡುಕುವಂತೆ ಮಾಡಿದ ವಿಚಿತ್ರ ಘಟನೆಯೊಂದು ತಾಲೂಕಿನ ಸಂತೆಕಟ್ಟೆ ಬಳಿ ನಡೆದಿದೆ.

ಸಂಭ್ರಮದಿಂದ ಬಂದವನಿಗೆ ಕಾದಿತ್ತು ಶಾಕ್:

ಲಭ್ಯವಿರುವ ಮಾಹಿತಿಯ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೊಬ್ಬ ಕಡಬದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪ್ರೇಯಸಿಯ ಜನ್ಮದಿನವನ್ನು ಆಚರಿಸಲು ಉತ್ಸಾಹದಿಂದ ಬಂದಿದ್ದ. ಇದಕ್ಕಾಗಿ ಆತ ತನ್ನ ಸ್ನೇಹಿತನ ಸ್ವಿಫ್ಟ್ ಕಾರನ್ನು ಪಡೆದುಕೊಂಡು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಕಡಬ ಸಂತೆಕಟ್ಟೆಗೆ ಆಗಮಿಸಿದ್ದ. ಯುವತಿ ಕೆಲಸ ಮಾಡುವ ಕಚೇರಿಯ ಮೊದಲ ಮಹಡಿಯಲ್ಲಿ ಇಬ್ಬರೂ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ, ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ಚರಂಡಿಗೆ ಬಿತ್ತು ಕಾರಿನ ಕೀ:

ಮಾತಿಗೆ ಮಾತು ಬೆಳೆದು ಕೋಪಗೊಂಡ ಯುವತಿ, ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದುಕೊಂಡು ರಸ್ತೆ ಬದಿಯಲ್ಲಿದ್ದ ಹೂಳು ತುಂಬಿದ ಚರಂಡಿಗೆ ಎಸೆದು ಅಲ್ಲಿಂದ ಹೊರಟು ಹೋಗಿದ್ದಾಳೆ. ಕಾರು ಕದಲಿಸಲಾಗದೆ, ಸ್ನೇಹಿತನ ವಾಹನಕ್ಕೆ ಏನು ಉತ್ತರಿಸಬೇಕೆಂದು ತಿಳಿಯದೆ ಯುವಕ ದಿಕ್ಕುತೋಚದಂತಾಗಿದ್ದಾನೆ.

5 ಗಂಟೆಗಳ ಕಾಲ ಹರಸಾಹಸ:

ಮಧ್ಯಾಹ್ನ 2:30ರ ಸುಮಾರಿಗೆ ಯುವಕ ಒಬ್ಬನೇ ಚರಂಡಿಯ ಕೊಳಚೆ ನೀರಿನಲ್ಲಿ ಕೀ ಹುಡುಕಲು ಮುಂದಾಗಿದ್ದ. ಆತನ ಕಷ್ಟವನ್ನು ಕಂಡ ಸ್ಥಳೀಯರು ಮತ್ತು ಹಾದಿಪೋಕರು ಆತನ ನೆರವಿಗೆ ಧಾವಿಸಿ ಸತತವಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ರಾತ್ರಿ 7:30ರವರೆಗೂ ಅಂದರೆ ಸುಮಾರು 5 ಗಂಟೆಗಳ ಕಾಲ ಸುದೀರ್ಘ ಹುಡುಕಾಟ ನಡೆಸಿದರೂ ಕೀ ಪತ್ತೆಯಾಗಲಿಲ್ಲ.

​ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದ ಈ ವಿಚಿತ್ರ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.



image