ಬಂಟ್ವಾಳ/ವಿಟ್ಲ: ನದಿಯಿಂದ ಅಕ್ರಮವಾಗಿ ಮರಳು ತೆಗೆದು ಗೋಣಿ ಚೀಲಗಳಿಗೆ ತುಂಬಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ವಿಟ್ಲ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಅಪಾರ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಕಂಬಳಬೆಟ್ಟು ಸಮೀಪದ ನೆಕ್ಕರೆ ಎಂಬಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ಎತ್ತಿ ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ಸ್ಥಳದಲ್ಲಿದ್ದ ಕುಳಾ ಗ್ರಾಮದ ಕಾರ್ಯಾಡಿ ನಿವಾಸಿ ಮೊಹಮ್ಮದ್ ಹಾಗೂ ಒಕ್ಕೆತ್ತೂರು ನಿವಾಸಿ ಶರೀಫ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಂದ ಸುಮಾರು 60 ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಮರಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಅಕ್ರಮ ಮರಳುಗಾರಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
