ರಾಜ್ಯ

ಬೆಂಗಳೂರು / ಮಂಗಳೂರು : ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಬಿಸಿಎ ಪದವೀಧರ: 600 ಸಿಸಿಟಿವಿ ಪರಿಶೀಲಿಸಿ ಖತರ್ನಾಕ್ ಕಳ್ಳನನ್ನ ಬಂಧಿಸಿದ ಪೊಲೀಸರು!

 


ಬೆಂಗಳೂರು / ಮಂಗಳೂರು:

ಸಾಮಾಜಿಕ ಜಾಲತಾಣಗಳು ಇಂದು ಜ್ಞಾನಾರ್ಜನೆಗೆ ಎಷ್ಟು ಸಹಕಾರಿಯೋ, ದುರ್ಬಳಕೆ ಮಾಡಿಕೊಳ್ಳುವವರಿಗೆ ಅಷ್ಟೇ ಸಕ್ರಿಯ ಹಾದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ವಿಚಾರಗಳನ್ನು ಕಲಿತು ಸಮಾಜಕ್ಕೆ ಮಾದರಿಯಾಗುವವರ ನಡುವೆ, ಅಡ್ಡದಾರಿ ಹಿಡಿದು ಜೀವನ ಹಾಳುಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯಿಲ್ಲ. ಇದಕ್ಕೆ ತಾಜಾ ಉದಾಹರಣೆ ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಈ ಖತರ್ನಾಕ್ ಕಳ್ಳ!

​ವಿದ್ಯಾಭ್ಯಾಸ ಮುಗಿಸಿ ಸೂಕ್ತ ಕೆಲಸ ಸಿಗದೆ ಅಲೆಯುತ್ತಿದ್ದ 'ಸತ್ಯ' ಎಂಬ ಬಿಸಿಎ (BCA) ಪದವೀಧರ, ಕಷ್ಟಪಟ್ಟು ಸಂಪಾದಿಸುವ ಬದಲು ಸುಲಭವಾಗಿ ಹಣ ಗಳಿಸಲು ಕಳ್ಳತನದ ಹಾದಿ ತುಳಿದಿದ್ದ. ಯೂಟ್ಯೂಬ್‌ನಲ್ಲಿ ಮೊಬೈಲ್ ಶೋರೂಂಗಳಿಗೆ ಕನ್ನ ಹಾಕುವುದು ಹೇಗೆ ಎಂಬುದನ್ನು ಹುಡುಕಿ, ತರಬೇತಿ ಪಡೆದಂತೆ ಸಂಚು ರೂಪಿಸಿ ಸರಣಿ ಕಳ್ಳತನಗಳನ್ನು ಎಸಗುತ್ತಿದ್ದ.

350 ಕಿ.ಮೀ ಬೆನ್ನಟ್ಟಿ ಕಳ್ಳನ ಬಂಧನ:

ಇತ್ತೀಚೆಗೆ ನಗರದ ಪ್ರಮುಖ ಮೊಬೈಲ್ ಅಂಗಡಿಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಚುರುಕುಗೊಳಿಸಿದ್ದರು. ಆರೋಪಿಯ ಸುಳಿವು ಪತ್ತೆಹಚ್ಚಲು ಸುಮಾರು 600ಕ್ಕೂ ಹೆಚ್ಚು ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಲಾಯಿತು. ಕೊನೆಗೆ ಕಳ್ಳನ ಜಾಡು ಹಿಡಿದ ತನಿಖಾ ತಂಡ, ಸತತ 350 ಕಿಲೋಮೀಟರ್ ಬೆನ್ನಟ್ಟಿ ಖತರ್ನಾಕ್ ಸತ್ಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸರೇ ಶಾಕ್!

ಬಂಧಿತ ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಆತ ನೀಡಿದ ಮಾಹಿತಿ ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬರಿ ಯೂಟ್ಯೂಬ್ ವೀಡಿಯೋಗಳನ್ನು ನೋಡಿಯೇ ಅತ್ಯಂತ ಚಾಣಾಕ್ಷತನದಿಂದ 11 ಬೆಲೆಬಾಳುವ ಮೊಬೈಲ್‌ಗಳು, 9 ಲ್ಯಾಪ್‌ಟಾಪ್‌ಗಳು ಹಾಗೂ 2 ಟ್ಯಾಬ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಸುಲಭವಾಗಿ ಹಣ ಗಳಿಸಲು ಹೋಗಿ ಪದವೀಧರನೊಬ್ಬ ಈಗ ಜೈಲು ಕಂಬಿ ಎಣಿಸುವಂತಾಗಿದೆ.



image