ದಕ್ಷಿಣ ಕನ್ನಡ

ಬೆಳ್ತಂಗಡಿ: ಅಕ್ರಮ ಮರ ಕಡಿತ ಹಾಗೂ ಸಾಗಾಟ ಜಾಲ ಪತ್ತೆ: ಇಬ್ಬರ ಬಂಧನ, ರೂ. 6.30 ಲಕ್ಷ ಮೌಲ್ಯದ ಸ್ವತ್ತು ಜಪ್ತಿ

 


ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಸಾಗಾಟಕ್ಕೆ ಬಳಸಿದ್ದ ಲಾರಿ ಹಾಗೂ ಮರದ ದಿಮ್ಮಿಗಳನ್ನು ಜಪ್ತಿ ಮಾಡಿದ್ದಾರೆ.

​ಪುದುವೆಟ್ಟು ಗ್ರಾಮದ ಗುತ್ತು ಎಂಬಲ್ಲಿನ ಸರ್ಕಾರಿ ಜಾಗ (ಸರ್ವೆ ನಂ. 142) ಹಾಗೂ ದಿನೇಶ್ ಗೌಡ ಎಂಬವರ ಸ್ವಾಧೀನದಲ್ಲಿದ್ದ ಜಾಗದಲ್ಲಿ (ಸರ್ವೆ ನಂ. 281/2) ಕಾನೂನುಬಾಹಿರವಾಗಿ ವಿವಿಧ ತಳಿಯ 16 ಬೆಲೆಬಾಳುವ ಮರಗಳನ್ನು ಕಡಿಯಲಾಗಿತ್ತು. ಬಳಿಕ ಅವುಗಳನ್ನು ದಿಮ್ಮಿ ಹಾಗೂ ಕಟ್ಟಿಗೆಗಳನ್ನಾಗಿ ಪರಿವರ್ತಿಸಿ, ಲಾರಿಯಲ್ಲಿ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಜುಲೈ 18ರಂದು ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಕೃತ್ಯವನ್ನು ಬಯಲಿಗೆಳೆದಿದ್ದಾರೆ.

ವಶಪಡಿಸಿಕೊಂಡ ಸ್ವತ್ತುಗಳು:

ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿಗಳು 15.655 ಘನ ಮೀಟರ್ ಅಳತೆಯ 51 ಮರದ ದಿಮ್ಮಿಗಳು, 3.000 ಘನ ಮೀಟರ್ ಕಟ್ಟಿಗೆ ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ 'KA 18 A 1360' ನೋಂದಣಿ ಸಂಖ್ಯೆಯ ಲಾರಿಯನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮರದ ದಿಮ್ಮಿ, ಕಟ್ಟಿಗೆ ಹಾಗೂ ಲಾರಿಯ ಒಟ್ಟು ಮೌಲ್ಯ ಸುಮಾರು 6,30,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಪುದುವೆಟ್ಟು ಗ್ರಾಮದ ನಿವಾಸಿ ದಿನೇಶ್ ಗೌಡ (41) ಹಾಗೂ ಮರ ಸಾಗಿಸುತ್ತಿದ್ದ ಲಾರಿ ಚಾಲಕ, ಬಂಟ್ವಾಳ ತಾಲೂಕಿನ ಇರಾ ಗ್ರಾಮದ ನಿವಾಸಿ ಶಹದ್ದುನ್ನಿ ಮೊಹಮ್ಮದ್ ಜಿ (27) ಎಂಬಿಬ್ಬರ ವಿರುದ್ಧ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿದೆ.

ಕಾನೂನು ಕ್ರಮ:

ಈ ಅಕ್ರಮ ಕೃತ್ಯವು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 33(2)(V), 71A, ಕರ್ನಾಟಕ ಅರಣ್ಯ ನಿಯಮಗಳು 1969ರ ನಿಯಮ 25(3) ಹಾಗೂ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಕಲಂ 8(1)ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಆರೋಪಿಗಳ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು:

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಾಡಿಗ ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿಗಳಾದ ರವಿಚಂದ್ರ ಮತ್ತು ನಾಗೇಶ್, ಗಸ್ತು ಅರಣ್ಯ ಪಾಲಕರಾದ ರವಿ ಜಟ್ಟಿ, ಪರಶುರಾಮ, ವಿರೇಶ್, ಪ್ರತಾಪ್ ಕುಮಾರ್ ಹಾಗೂ ಚಾಲಕ ಕುಶಲ ಗೌಡ ಭಾಗವಹಿಸಿದ್ದರು.



image