ದಕ್ಷಿಣ ಕನ್ನಡ

ಅಮೃತ ಭಾರತ ಯೋಜನೆ: ಬಂಟ್ವಾಳ ಸೇರಿ ದೇಶದ 75 ರೈಲ್ವೆ ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

 


₹26.18 ಕೋಟಿ ವೆಚ್ಚದಲ್ಲಿ ಬಂಟ್ವಾಳ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ; ಕೊಂಕಣ ರೈಲ್ವೆ ವಿಲೀನಕ್ಕೆ ಸಂಸದ ಬ್ರಿಜೇಶ್ ಚೌಟ ಆಗ್ರಹ

ಬಂಟ್ವಾಳ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಅಮೃತ ಭಾರತ ನಿಲ್ದಾಣ ಯೋಜನೆ'ಯಡಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನವೀಕರಣಗೊಂಡಿರುವ ಬಂಟ್ವಾಳ ರೈಲ್ವೆ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಿದ್ದಾರೆ. ಪಂಜಾಬ್‌ನ ಜಲಂಧರ್ ಕ್ಯಾಂಟ್ ನಿಲ್ದಾಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿಯವರು, ಬಂಟ್ವಾಳ ಸೇರಿದಂತೆ ದೇಶದ ಒಟ್ಟು 75 ರೈಲ್ವೆ ನಿಲ್ದಾಣಗಳನ್ನು ಏಕಕಾಲದಲ್ಲಿ ಉದ್ಘಾಟಿಸಿದರು. ಬಂಟ್ವಾಳ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್‌ಇಡಿ ಪರದೆಯ ಮೂಲಕ ಈ ಐತಿಹಾಸಿಕ ಕ್ಷಣದ ನೇರ ಪ್ರಸಾರವನ್ನು ಸಾರ್ವಜನಿಕರು ವೀಕ್ಷಿಸಿದರು.

ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಹೊಸ ವೇಗ:

ಇದೇ ವೇಳೆ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಬಂಟ್ವಾಳ ನಿಲ್ದಾಣವನ್ನು ₹26.18 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

​ಇದೇ ಸಂದರ್ಭದಲ್ಲಿ ಕರಾವಳಿ ಭಾಗದ ರೈಲ್ವೆ ಸಂಪರ್ಕದ ಪ್ರಮುಖ ಬೇಡಿಕೆಯೊಂದನ್ನು ಪ್ರಸ್ತಾಪಿಸಿದ ಸಂಸದರು, "ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೊಂಕಣ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಗಮನ ಸೆಳೆಯಲು ಕರಾವಳಿ ಭಾಗದ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಸಹಕಾರ ನೀಡಬೇಕು" ಎಂದು ಕರೆ ನೀಡಿದರು.

ವಂದೇ ಭಾರತ್‌ಗೆ ಪೂರಕ ವಿದ್ಯುದೀಕರಣ ಶ್ಲಾಘನೆ:

ಮುಂದಿನ ದಿನಗಳಲ್ಲಿ ಪುತ್ತೂರು ರೈಲ್ವೆ ನಿಲ್ದಾಣವನ್ನೂ ಸಹ ಅಮೃತ ಭಾರತ ಯೋಜನೆಯಡಿ ಸೇರ್ಪಡೆಗೊಳಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ ಚೌಟ ಅವರು, ಮಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಸುಗಮಗೊಳಿಸಲು ಅಗತ್ಯವಿದ್ದ ವಿದ್ಯುದೀಕರಣ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿದ ನೈಋತ್ಯ ರೈಲ್ವೆಯ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕೇವಲ 25 ರೂಪಾಯಿಗಳ ಅತ್ಯಲ್ಪ ದರದಲ್ಲಿ ಸಾರ್ವಜನಿಕರು ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ಪ್ರಯಾಣಿಸಬಹುದಾಗಿದ್ದು, ಇಂತಹ ಸೌಲಭ್ಯಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರುಗಳಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಡಿವಿಜನಲ್ ರೈಲ್ವೆ ಮ್ಯಾನೇಜರ್ ಮುದಿತ್ ಮಿತ್ತಲ್ ಹಾಗೂ ಗತಿಶಕ್ತಿಯ ಹಿರಿಯ ಅಭಿಯಂತರ ಆನಂದ್ ಭಾರ್ತಿ ಉಪಸ್ಥಿತರಿದ್ದರು.

​ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರೈಲ್ವೆ ಸಿಬ್ಬಂದಿ ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ವೈಭವ ಮತ್ತು ವಿದ್ಯಾರ್ಥಿಗಳಿಗೆ ಪುರಸ್ಕಾರ:

ಪ್ರಧಾನಿಯವರ ಭಾಷಣಕ್ಕೂ ಮುನ್ನ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ನೆರೆದಿದ್ದವರ ಗಮನ ಸೆಳೆದವು. ಬಂಟ್ವಾಳ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಹಂಸಿನಿ ಕುಮಾರ್ ತಂಡದವರಿಂದ ತುಳು ಮತ್ತು ಕನ್ನಡ ಗೀತೆಗಳ ಗಾಯನ ನಡೆಯಿತು. ಬಿ.ಸಿ.ರೋಡ್ ಅಜ್ಜಿಬೆಟ್ಟುವಿನ ಬಿ.ಮೂಡ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಚೆಂಡೆ, ತಾಳ ಹಾಗೂ ಯಕ್ಷಗಾನ ನೃತ್ಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ರೈಲ್ವೆ ಉದ್ಯೋಗಿಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.



image