ದಕ್ಷಿಣ ಕನ್ನಡ

ಬೆಳ್ತಂಗಡಿ: ₹7.60 ಲಕ್ಷ ಮೌಲ್ಯದ MDMA ವಶ; ಡ್ರಗ್ಸ್ ಮಾರಾಟ ಜಾಲ ಭೇದಿಸಿದ ಪೊಲೀಸರು, ಓರ್ವನ ಬಂಧನ!

 


ಬೆಳ್ತಂಗಡಿ: ತಾಲೂಕಿನಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಬೆಳ್ತಂಗಡಿ ಪೊಲೀಸರು, ಬೃಹತ್ ಪ್ರಮಾಣದ MDMA ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು 7,60,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ನಡೆದಿದ್ದೇನು?

​ಜುಲೈ 29ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಆನಂದ ಎಂ ಹಾಗೂ ಅವರ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿದೆ. ಅಲ್ಲಿ ನಿಂತಿದ್ದ ಆಟೋ ರಿಕ್ಷಾ ಒಂದರ ಬಳಿ ಇದ್ದ ಯುವಕನೊಬ್ಬ ಪೊಲೀಸರನ್ನು ನೋಡಿ ಓಡಿಹೋಗಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕುವೆಟ್ಟು ನಿವಾಸಿ ತ್ವಲಹ್‌ ಅಲಿಯಾಸ್ ಅನ್ವರ್ / ಅನ್ಸರ್‌ (21) ಎಂಬುದು ತಿಳಿದುಬಂದಿದೆ.

MDMA, ಕಾರು ಮತ್ತು ಮೊಬೈಲ್ ಜಪ್ತಿ

​ಬಂಧಿತ ಆರೋಪಿಯನ್ನು ಪರಿಶೀಲಿಸಿದಾಗ ಆತನ ಬಳಿ 27 ಗ್ರಾಂ ಗಾಂಜಾ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ. ಬಳಿಕ ಸ್ಥಳದಲ್ಲಿದ್ದ ಆಟೋ ರಿಕ್ಷಾ ಮತ್ತು ಕಾರನ್ನು ತೀವ್ರ ತನಿಖೆಗೆ ಒಳಪಡಿಸಿದಾಗ 76.59 ಗ್ರಾಂ ತೂಕದ, 7.60 ಲಕ್ಷ ರೂ. ಮೌಲ್ಯದ ನಿಷೇಧಿತ 'MDMA' ಮಾದಕ ದ್ರವ್ಯ ಪತ್ತೆಯಾಗಿದೆ.

ಓರ್ವ ಪರಾರಿ, ತನಿಖೆ ಚುರುಕು

​ಬಂಧಿತ ಅನ್ಸರ್‌ಗೆ ಈ ಡ್ರಗ್ಸ್ ಪೂರೈಸಲು ಬಂದಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಅಮ್ಜತ್ ಖರಾರ್ ಎಂಬಾತ ಪೊಲೀಸರ ಕಾರ್ಯಾಚರಣೆ ಕಂಡು ತಾನು ತಂದಿದ್ದ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ದೂರು ದಾಖಲಾಗಿದೆ. ಬಂದಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ (Judicial Custody) ವಿಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



image