ನ್ಯೂಸ್ 2 ಡೇ ಕನ್ನಡ ಡಿಜಿಟಲ್ ಡೆಸ್ಕ್ (ಮಂಗಳೂರು):
ಕರಾವಳಿಯಲ್ಲಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧವಾಗಿರುವ ಮಂಗಳೂರು ನಗರ ಕಮಿಷನರೇಟ್ ಪೊಲೀಸರು ಬೃಹತ್ ಕಾರ್ಯಾಚರಣೆಯೊಂದನ್ನು ನಡೆಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು ₹82 ಕೋಟಿ ಅಧಿಕ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಸಾರ್ವಜನಿಕವಾಗಿ ಬೆಂಕಿಗಾಹುತಿ ಮಾಡಿ ನಾಶಪಡಿಸಲಾಗಿದೆ.
ಬುಧವಾರ (ಜುಲೈ 29) ಬೆಳಿಗ್ಗೆ 11:00 ಗಂಟೆಗೆ ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ 'ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್‌ಮೆಂಟ್ ಲಿಮಿಟೆಡ್' (ರೀ ಸಸ್ಟೈನಬಿಲಿಟಿ ಹೆಲ್ತ್‌ಕೇರ್ ಸೊಲ್ಯೂಷನ್ಸ್) ಘಟಕದಲ್ಲಿ ಈ ಮಾದಕ ದ್ರವ್ಯ ನಾಶ ಪ್ರಕ್ರಿಯೆ ನೆರವೇರಿತು. ಕಾನೂನುಬದ್ಧ 'ಡ್ರಗ್ ಡಿಸ್ಪೋಸಲ್ ಕಮಿಟಿ'ಯ ಸಮ್ಮುಖದಲ್ಲಿ, ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನವನ್ನು ಬಳಸಿ ಈ ಎಲ್ಲಾ ನಿಷೇಧಿತ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.
ಯಾವೆಲ್ಲಾ ಮಾದಕ ದ್ರವ್ಯಗಳು ನಾಶ?
ನಗರದ ಒಟ್ಟು 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 59 ಎನ್‌ಡಿಪಿಎಸ್ (NDPS) ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಈ ಕೆಳಗಿನ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ:
- ಗಾಂಜಾ: 450 ಕೆ.ಜಿ.
- ಎಂ.ಡಿ.ಎಂ.ಎ. (MDMA): 43 ಕೆ.ಜಿ. 260 ಗ್ರಾಂ.
- ಹೈಡ್ರೋ ವೀಡ್ ಗಾಂಜಾ: 880 ಗ್ರಾಂ.
- ಭಾಂಗ್: 1 ಕೆ.ಜಿ. 200 ಗ್ರಾಂ.
- ಚರಸ್: 80 ಗ್ರಾಂ.
ಪ್ರಮುಖ ಪ್ರಕರಣಗಳ ಕೊಡುಗೆ:
ಇಂದು ನಾಶಪಡಿಸಲಾದ ಸುಮಾರೂ 82 ಕೋಟಿ ರೂ. ಮೌಲ್ಯದ ಸರಕಿನಲ್ಲಿ ಪ್ರಮುಖ ಪ್ರಕರಣಗಳ ಪಾತ್ರ ದೊಡ್ಡದಾಗಿದೆ:
- ಮಂಗಳೂರು ಪೂರ್ವ ಠಾಣೆ (2024): ಪತ್ತೆಯಾಗಿದ್ದ ಸುಮಾರು ₹75 ಕೋಟಿ ಮೌಲ್ಯದ 37 ಕೆ.ಜಿ ಎಂ.ಡಿ.ಎಂ.ಎ.
- ಮುಲ್ಕಿ ಠಾಣೆ (2025): ₹4.47 ಕೋಟಿ ಮೌಲ್ಯದ 4 ಕೆ.ಜಿ ಎಂ.ಡಿ.ಎಂ.ಎ.
- ಮೂಡಬಿದ್ರೆ ಠಾಣೆ: ₹36 ಲಕ್ಷ ಮೌಲ್ಯದ 111 ಕೆ.ಜಿ ಗಾಂಜಾ.
- ಕೊಣಾಜೆ ಠಾಣೆ: ₹20 ಲಕ್ಷ ಮೌಲ್ಯದ 106 ಕೆ.ಜಿ ಗಾಂಜಾ.
2026 ರಲ್ಲಿ ಪೊಲೀಸರ ಭರ್ಜರಿ ಬೇಟೆ:
ನಗರದಲ್ಲಿ ಮಾದಕ ದ್ರವ್ಯ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಪೊಲೀಸರು ದಾಳಿ ತೀವ್ರಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ (2026) ಇದುವರೆಗೆ:
- ದಾಖಲಾದ ಪ್ರಕರಣಗಳು: 87 ಎನ್‌ಡಿಪಿಎಸ್ ಪ್ರಕರಣಗಳು.
- ಬಂಧಿತ ಆರೋಪಿಗಳು (ಪೆಡ್ಲರ್‌ಗಳು): 157 ಮಂದಿ.
- ವಶಪಡಿಸಿಕೊಂಡ ಸರಕು: ₹8.18 ಕೋಟಿಗೂ ಅಧಿಕ ಮೌಲ್ಯದ 148.6 ಕೆ.ಜಿ ಗಾಂಜಾ, 7.16 ಕೆ.ಜಿ ಎಂ.ಡಿ.ಎಂ.ಎ., 1.7 ಕೆ.ಜಿ ಹೈಡ್ರೋ ವೀಡ್ ಗಾಂಜಾ.
- ಸೇವಕರ ವಿರುದ್ಧ ಕ್ರಮ: ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 463 ವ್ಯಕ್ತಿಗಳ ವಿರುದ್ಧ 356 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರಲ್ಲಿ ವಿನಂತಿ:
ನಿಮ್ಮ ಸುತ್ತಮುತ್ತ ಎಲ್ಲಾದರೂ ಮಾದಕ ದ್ರವ್ಯ ಮಾರಾಟ ಅಥವಾ ಸೇವನೆ ನಡೆಯುತ್ತಿರುವುದು ಕಂಡುಬಂದರೆ ತಕ್ಷಣವೇ ಪೊಲೀಸರ QR ಕೋಡ್ ಸ್ಕ್ಯಾನ್ ಮಾಡಿ ಅಥವಾ 112 / 9480802321 ಕಂಟ್ರೋಲ್ ರೂಮ್ ಸಂಖ್ಯೆಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.
