ದೇಶ

ಹಿಮಾಚಲ ಪ್ರದೇಶ: ವಿಸ್ಮಯ: 9 ತಿಂಗಳ ಗರ್ಭಿಣಿ ಎಮ್ಮೆ ಹೊಟ್ಟೆಯಲ್ಲಿದ್ದ 66 ಕಬ್ಬಿಣದ ಚೂರುಗಳನ್ನು ಹೊರತೆಗೆದ ವೈದ್ಯರು!

 


ಉನಾ (ಹಿಮಾಚಲ ಪ್ರದೇಶ):

ಆಕಸ್ಮಿಕವಾಗಿ ಕಬ್ಬಿಣದ ಚೂರುಗಳನ್ನು ನುಂಗಿ ಸಾವಿನ ದವಡೆಯಲ್ಲಿದ್ದ ಒಂಬತ್ತು ತಿಂಗಳ ಗರ್ಭಿಣಿ ಎಮ್ಮೆಯೊಂದನ್ನು ಪಶುವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಬದುಕಿಸಿದ ಅಪರೂಪದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಜಿಲ್ಲೆಯ ಲಾಲ್ರಿಯಲ್ಲಿರುವ ಸರ್ಕಾರಿ ಪಶುವೈದ್ಯಕೀಯ ಪಾಲಿಕ್ಲಿನಿಕ್‌ನಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆದಿದ್ದು, ಎಮ್ಮೆಯ ಹೊಟ್ಟೆಯಿಂದ ಬರೋಬ್ಬರಿ 66 ಮೊನಚಾದ ಲೋಹದ ವಸ್ತುಗಳನ್ನು ಹೊರತೆಗೆಯಲಾಗಿದೆ.

ಪ್ರಾಣಾಪಾಯದಿಂದ ಪಾರಾದ ಮೂಕಜೀವಿ

​ಹಿಮಾಚಲ ಪ್ರದೇಶದ ಹರೋಲಿ ಉಪವಿಭಾಗದ ಬರೇವಾಲ್ ಗ್ರಾಮದ ನಿವಾಸಿ ಕರ್ನೈಲ್ ಸಿಂಗ್ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿದೆ. ಎಮ್ಮೆಯ ನಡವಳಿಕೆಯಲ್ಲಿ ಏರುಪೇರಾಗಿ, ತೀವ್ರ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಮಾಲೀಕರು ತಕ್ಷಣವೇ ಅದನ್ನು ಲಾಲ್ರಿಯ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದರು.

​ಪಶುವೈದ್ಯಕೀಯ ಅಧಿಕಾರಿ ಡಾ. ನಿಶಾಂತ್ ರನೌತ್ ನೇತೃತ್ವದ ತಜ್ಞರ ತಂಡ ಎಮ್ಮೆಗೆ ವಿವರವಾದ ರಕ್ತ ತಪಾಸಣೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಿದಾಗ ಹೊಟ್ಟೆಯಲ್ಲಿ ಅಪಾರ ಪ್ರಮಾಣದ ಕಬ್ಬಿಣದ ವಸ್ತುಗಳು ಇರುವುದು ಪತ್ತೆಯಾಯಿತು. ಎಮ್ಮೆ ಈಗಾಗಲೇ 9 ತಿಂಗಳ ಗರ್ಭಿಣಿಯಾಗಿದ್ದರಿಂದ ಮತ್ತು ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ತಕ್ಷಣವೇ ತುರ್ತು ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರು.

ಹೊಟ್ಟೆಯಲ್ಲಿದ್ದವು ಮೊಳೆ, ತಂತಿಗಳು!

​ಅತ್ಯಂತ ಎಚ್ಚರಿಕೆಯಿಂದ ನಡೆಸಿದ ಈ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ಎಮ್ಮೆಯ ಹೊಟ್ಟೆಯಲ್ಲಿದ್ದ ಮೊಳೆಗಳು, ತಂತಿಗಳು ಮತ್ತು ಚೂಪಾದ ಸಣ್ಣ ಕಬ್ಬಿಣದ ತುಣುಕುಗಳು ಸೇರಿದಂತೆ ಒಟ್ಟು 66 ಲೋಹದ ವಸ್ತುಗಳನ್ನು ಯಶಸ್ವಿಯಾಗಿ ಹೊರಗೆ ತೆಗೆದಿದ್ದಾರೆ.

ವೈದ್ಯರ ಮಾಹಿತಿ:

"ಸದ್ಯ ಎಮ್ಮೆಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಮುಂದಿನ 7 ರಿಂದ 10 ದಿನಗಳ ಕಾಲ ತಜ್ಞ ವೈದ್ಯರ ನಿರಂತರ ಮೇಲ್ವಿಚಾರಣೆಯಲ್ಲಿ ಎಮ್ಮೆಗೆ ಚಿಕಿತ್ಸೆ ಮತ್ತು ಆರೈಕೆ ಮುಂದುವರಿಯಲಿದೆ" ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ. ನಿಶಾಂತ್ ರನೌತ್ ತಿಳಿಸಿದ್ದಾರೆ.


​ಸಕಾಲದಲ್ಲಿ ಚಿಕಿತ್ಸೆ ನೀಡಿ ಗರ್ಭಿಣಿ ಎಮ್ಮೆ ಮತ್ತು ಅದರ ಹೊಟ್ಟೆಯಲ್ಲಿದ್ದ ಮರಿಯ ಪ್ರಾಣ ಉಳಿಸಿದ ಪಶುವೈದ್ಯರ ತಂಡದ ಕಾರ್ಯಕ್ಕೆ ಜಾನುವಾರು ಮಾಲೀಕರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.



image