ಕ್ರೈಂ

​Bangalore: ಪ್ರೀತಿಸಿ ಮದುವೆಯಾಗಿದ್ದ ಶಿಕ್ಷಕಿ 4 ತಿಂಗಳಲ್ಲೇ ಆತ್ಮಹತ್ಯೆಗೆ ಶರಣು; ಡೆತ್‌ನೋಟ್ ಪತ್ತೆ

ಬೆಂಗಳೂರು: ಪ್ರೀತಿಸಿದ ಕೈ ಹಿಡಿದು ಹೊಸ ಜೀವನದ ಕನಸು ಕಟ್ಟಿಕೊಂಡಿದ್ದ ನವವಿವಾಹಿತೆಯೊಬ್ಬರು ಮದುವೆಯಾದ ಕೇವಲ ನಾಲ್ಕೇ ತಿಂಗಳಲ್ಲಿ ನೇಣಿಗೆ ಶರಣಾಗಿರುವ ಧೃತಿಗೆಡಿಸುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದೆ.

​ಮೃತ ದುರ್ದೈವಿಯನ್ನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶ್ವೇತಾ (೨೫) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ನಾಲ್ಕು ತಿಂಗಳ ಹಿಂದಷ್ಟೇ ಆಗಿದ್ದ ವಿವಾಹ:

​ನಾಲ್ಕು ತಿಂಗಳ ಹಿಂದಷ್ಟೇ ಶ್ವೇತಾ ತಾವು ಪ್ರೀತಿಸುತ್ತಿದ್ದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ಇವರು, ಇಂದು ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಸನ್ಮುಖಿಯಾಗಿದ್ದ ಶಿಕ್ಷಕಿಯ ಈ ದಿಢೀರ್ ನಿರ್ಧಾರದ ಹಿಂದೆ ಕೌಟುಂಬಿಕ ಕಲಹವಿದೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಸಂಶಯ ಮೂಡಿದೆ.

ಡೆತ್‌ನೋಟ್ ಪತ್ತೆ – ತನಿಖೆ ತೀವ್ರ:

​ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶ್ವೇತಾ ಅವರು ಡೆತ್‌ನೋಟ್ (ಮರಣ ಪತ್ರ) ಒಂದನ್ನು ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಡೆತ್‌ನೋಟ್‌ನಲ್ಲಿ ಏನಿದೆ ಮತ್ತು ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

​ಘಟನಾ ಸ್ಥಳದ ಮಹಜರು ನಡೆಸಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದು, ವಿಚಾರಣೆಯ ಬಳಿಕವಷ್ಟೇ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.



image