ರಾಜ್ಯ

Bangalore: ಲಕ್ಷ್ಮೀ ದೇವಿಗೆ ಅವಹೇಳನ ಆರೋಪ: ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ವಿರುದ್ಧ FIR ದಾಖಲು!


ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಹಿಂದೂ ಧರ್ಮದ ಆರಾಧ್ಯ ದೇವತೆ ಮಹಾಲಕ್ಷ್ಮಿ ಹಾಗೂ ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

​ವಿವಾದಕ್ಕೆ ಕಾರಣವೇನು?

​ಸಾಮಾಜಿಕ ಜಾಲತಾಣದ ವಿಡಿಯೋ ಒಂದರಲ್ಲಿ ಮಾತನಾಡಿರುವ ಆರ್ಯವರ್ಧನ್ ಗುರೂಜಿ, ದೇವತೆ ಮಹಾಲಕ್ಷ್ಮಿಯ ಬಗ್ಗೆ ಅತ್ಯಂತ ಅಸಭ್ಯ ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಮಾನವ ದೇಹದ ನಿರ್ದಿಷ್ಟ ಅಂಗವೊಂದರಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ಹೇಳುತ್ತಾ, ಅಶ್ಲೀಲ ಶಬ್ದಗಳನ್ನು ಬಳಸಿ ಪೂಜಿಸುವಂತೆ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋ ತೀವ್ರ ವಿವಾದ ಸೃಷ್ಟಿಸಿತ್ತು.

​ದೂರಿನಲ್ಲಿ ಏನಿದೆ?: "ಗುರೂಜಿ ಅವರ ಈ ಹೇಳಿಕೆಯು ಕೇವಲ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಷ್ಟೇ ಅಲ್ಲದೆ, ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಮಹಿಳೆಯರನ್ನು ಶಾರೀರಿಕವಾಗಿ ಮತ್ತು ಮಾತಿನ ಮೂಲಕ ಕೀಳಾಗಿ ಬಿಂಬಿಸಲಾಗಿದೆ," ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

​ದೂರು ದಾಖಲಾಗಿದ್ದು ಹೇಗೆ?

​ಆರ್ಯವರ್ಧನ್ ಗುರೂಜಿ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಮಾಜದಲ್ಲಿ ಶಾಂತಿ ಕದಡುವ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗಳನ್ನು ಕೆರಳಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿ ಸುಮನ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.

​ತನಿಖೆ ಚುರುಕುಗೊಳಿಸಿದ ಪೊಲೀಸರು:

​ದೂರನ್ನು ಸ್ವೀಕರಿಸಿದ್ದ ಶಂಕರಪುರಂ ಪೊಲೀಸರು ಆರಂಭದಲ್ಲಿ ಎಲ್.ಪಿ.ಟಿ (LPT) ದಾಖಲಿಸಿಕೊಂಡಿದ್ದರು. ಆ ಬಳಿಕ ವೈರಲ್ ಆಗಿದ್ದ ವಿಡಿಯೋ ತುಣುಕುಗಳನ್ನು ವಶಕ್ಕೆ ಪಡೆದು, ಅವುಗಳ ಸತ್ಯಾಸತ್ಯತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ತದನಂತರ ಕಾನೂನು ತಜ್ಞರ ಸಲಹೆ ಹಾಗೂ ವರದಿಯ ಆಧಾರದ ಮೇಲೆ ಸದ್ಯ ಆರ್ಯವರ್ಧನ್ ಗುರೂಜಿ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದರಿಂದಾಗಿ ಗುರೂಜಿಗೆ ಸದ್ಯ ಬಂಧನದ ಭೀತಿ ಎದುರಾಗಿದೆ.



image