ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರಸ್ತೆ ನಿವಾಸಿಯಾದ ಅಬ್ದುಲ್ ನಾಸಿರ್ (41) ಎಂಬಾತನೇ ಈಗ ಎನ್‌ಐಎ ಬಲೆಗೆ ಬಿದ್ದಿರುವ ಮತ್ತೊಬ್ಬ ಆರೋಪಿ. ಈತನನ್ನು ಕೇರಳದ ಕೊಚ್ಚಿಯಲ್ಲಿ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.
ತಲೆಮರೆಸಿಕೊಂಡಿದ್ದವರಿಗೆ ಆಶ್ರಯ ನೀಡಿದ್ದ ಆರೋಪ
ಪ್ರವೀಣ್ ನೆಟ್ಟಾರು ಹತ್ಯೆ ಕೃತ್ಯ ಎಸಗಿದ ಮುಖ್ಯ ಶೂಟರ್‌ಗಳು ಹಾಗೂ ಪ್ರಮುಖ ಸೂತ್ರಧಾರರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಈ ಇಬ್ಬರು ಆರೋಪಿಗಳು ವ್ಯವಸ್ಥಿತವಾಗಿ ಸಹಾಯ ಮಾಡಿದ್ದರು ಎನ್ನಲಾಗಿದೆ. ಆರೋಪಿಗಳು ಪೊಲೀಸರಿಗೆ ಸಿಗದಂತೆ ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ರಹಸ್ಯ ಅಡಗುತಾಣಗಳನ್ನು ವ್ಯವಸ್ಥೆ ಮಾಡಿಕೊಟ್ಟ ಗಂಭೀರ ಆರೋಪ ಇವರ ಮೇಲಿದೆ.
ನಾಲ್ಕು ವರ್ಷಗಳ ಬಳಿಕ ಸಿಕ್ಕಿಬಿದ್ದ ನೌಷಾದ್
ಹತ್ಯೆಯ ಬಳಿಕ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿಯಾಗಿದ್ದ ನೌಷಾದ್ ಪಡಂಗಡಿ ತಲೆ ಮರೆಸಿಕೊಂಡಿದ್ದ. ಕಳೆದ ನಾಲ್ಕು ವರ್ಷಗಳಿಂದ ಈತನ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದರು. ಕೊನೆಗೂ ಖಚಿತ ಮಾಹಿತಿ ಮೇರೆಗೆ ಇಂದು ಬೆಂಗಳೂರಿನಲ್ಲಿ ಈತನನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಅಬ್ದುಲ್ ನಾಸಿರ್‌ನನ್ನೂ ಜಾಲಾಡಿ ವಶಕ್ಕೆ ಪಡೆಯಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಸಿದ್ಧಪಡಿಸಿರುವ ಒಟ್ಟು 27 ಆರೋಪಿಗಳ ಪಟ್ಟಿಯಲ್ಲಿ ಈ ಇಬ್ಬರ ಹೆಸರೂ ಸೇರಿದ್ದು, ಸದ್ಯ ಇವರ ಬಂಧನದಿಂದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಂತಾಗಿದೆ.
