ಬೆಂಗಳೂರು: ಹೆತ್ತವರಿಗೆ ತಮ್ಮ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕು ಎನ್ನುವ ಹಂಬಲ ಇರುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿಯರು ಮದುವೆಗಿಂತ ಹೆಚ್ಚಾಗಿ ತಮ್ಮ ಶಿಕ್ಷಣ, ವೃತ್ತಿಜೀವನ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮನೆಯಲ್ಲಿ ಮದುವೆಯ ಪ್ರಸ್ತಾಪ ಬಂದಾಗಲೆಲ್ಲಾ ನಾನಾ ಕಾರಣ ನೀಡಿ ಮುಂದೂಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿ, ತಾಯಿ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಮಾಡಿದ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು, ಮದುವೆ ಬೇಡವೆಂದು ತಾಯಿ ಎಷ್ಟೇ ಬಲವಂತ ಮಾಡಿದರೂ ಕೇಳದ ಮಗಳು, ಕೊನೆಗೆ ಯಾರಿಗೂ ಊಹಿಸದಂತಹ ನಿರ್ಧಾರವೊಂದನ್ನು ಕೈಗೊಂಡಿದ್ದಾಳೆ. ತಾಯಿಯ ಕಾಟದಿಂದ ಬಚಾವಾಗಲು ಆಕೆ ನೇರವಾಗಿ ತನ್ನ ತಲೆಯನ್ನೇ ಬೋಳಿಸಿಕೊಂಡಿದ್ದಾಳೆ!
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್:
ಕೀರ್ತನಾ ಮೆನನ್ (@keertana.menonn) ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ ಆಕೆ ತನ್ನ ಕೂದಲನ್ನು ಪೂರ್ತಿಯಾಗಿ ಟ್ರಿಮ್ ಮಾಡಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, "ಅಮ್ಮ ಮದುವೆ ಮಾಡಿಕೋ ಎಂದು ಒತ್ತಾಯಿಸಿದಾಗ ನಾನು ಮಾಡಿದ ಕೆಲಸ ಇದು" ಎಂಬ ಒಕ್ಕಣೆಯನ್ನೂ ಬರೆದುಕೊಂಡಿದ್ದಾಳೆ.
ತಲೆ ಬೋಳಿಸಿಕೊಂಡ ನಂತರ ಆಕೆ ತನ್ನ ಸ್ನೇಹಿತರಿಗೆಲ್ಲಾ ವಿಡಿಯೋ ಕಾಲ್ ಮಾಡಿ ತನ್ನ ಹೊಸ ಅವತಾರವನ್ನು ತೋರಿಸಿದ್ದಾಳೆ. ಆಕೆಯ ಈ ಹಠಾತ್ ನಿರ್ಧಾರ ಮತ್ತು ಹೊಸ ಲುಕ್ ನೋಡಿ ಸ್ನೇಹಿತರೆಲ್ಲರೂ ಒಂದು ಕ್ಷಣ ದಂಗಾಗಿದ್ದಾರೆ.
ನೆಟ್ಟಿಗರ ಪರ-ವಿರೋಧದ ಚರ್ಚೆ:
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಿನ್ನ ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇದೊಂದು ತಮಾಷೆಯ ಪ್ರಸಂಗ ಎಂದು ನಕ್ಕರೆ, ಇನ್ನು ಕೆಲವರು ಮದುವೆಯ ಒತ್ತಡಕ್ಕೆ ಈ ರೀತಿಯ ವಿಭಿನ್ನ ಪ್ರತಿರೋಧ ತೋರಿರುವುದು ನಿಜಕ್ಕೂ ಧೈರ್ಯದ ಕೆಲಸ ಎಂದು ಯುವತಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಒಟ್ಟಿನಲ್ಲಿ ಮದುವೆ ತಪ್ಪಿಸಿಕೊಳ್ಳಲು ಯುವತಿ ಮಾಡಿದ ಈ 'ಸಾಹಸ' ಮಾತ್ರ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
