
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ಸಂಭವಿಸಿದೆ. ಕಾಲೇಜಿಗೆ ತೆರಳುವ ಸಲುವಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಏಕಾಏಕಿ ಭೀಕರ ದಾಳಿ ನಡೆಸಿದ್ದಾನೆ.
ಸ್ಥಳೀಯ ಮೂಲಗಳ ಪ್ರಕಾರ, ಜವ್ವರ್ ಎಂಬ ವ್ಯಾಪಾರಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದಾಳಿಯ ತೀವ್ರತೆಗೆ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಸ್ಥಳದಲ್ಲಿ ಆತಂಕದ ವಾತಾವರಣ:
ತೀವ್ರ ರಕ್ತಸ್ರಾವದ ಕಾರಣ ಬಸ್ ನಿಲ್ದಾಣದ ಆವರಣವೆಲ್ಲಾ ರಕ್ತಸಿಕ್ತವಾಗಿದ್ದು, ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶದ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಪೈಶಾಚಿಕ ಕೃತ್ಯಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದುಬರಬೇಕಾಗಿದೆ. ಸದ್ಯ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.