ಬಂಟ್ವಾಳ: ಇಲ್ಲಿನ ಯುವತಿ ಲಾವಣ್ಯ ಹತ್ಯೆ ಪ್ರಕರಣ ಇಡೀ ತಾಲೂಕನ್ನು ಬೆಚ್ಚಿಬೀಳಿಸಿದ್ದು, ಮೃತ ಯುವತಿಯ ಮನೆಯಲ್ಲಿ ಬಂಧು-ಮಿತ್ರರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ತಾಯಿ ರೂಪಾ ಅವರು ಆರೋಪಿ ಚೇತನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
"ಆತನನ್ನು ಇಲ್ಲೇ ಕರೆತನ್ನಿ, ನಾನೇ ಮುಗಿಸುತ್ತೇನೆ!"
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಣ್ಣೀರಿಟ್ಟ ತಾಯಿ ರೂಪಾ, "ಆ ಕ್ರೂರಿಯನ್ನು ಊರಿನ ಜನರೆಲ್ಲಾ ಸೇರಿ ಇಲ್ಲೇ ಎಳೆದುಕೊಂಡು ಬನ್ನಿ. ನನ್ನ ಮಗಳನ್ನು ಕೊಂದ ಆತನನ್ನು ನಾನೇ ಸ್ವತಃ ಮುಗಿಸುತ್ತೇನೆ" ಎಂದು ಆಕ್ರೋಶ ಹೊರಹಾಕಿದರು. "ಯಾವ ತಪ್ಪೂ ಮಾಡದ ನನ್ನ ಮಗಳು ಅತ್ಯಂತ ಅಮಾಯಕಳು. ಅವಳು ಯಾರ ಜೊತೆಗೂ ಹೆಚ್ಚಿಗೆ ಮಾತನಾಡುತ್ತಿದ್ದ ಹುಡುಗಿಯೇ ಅಲ್ಲ. ಕೊಲೆಗಡುಕ ಚೇತನ್ ಬಗ್ಗೆ ಅವಳು ಎಂದಿಗೂ ನನ್ನ ಬಳಿ ಏನನ್ನೂ ಹೇಳಿಕೊಂಡಿರಲಿಲ್ಲ" ಎಂದು ದುಃಖ ತೋಡಿಕೊಂಡಿದ್ದಾರೆ.
ನಮಗೇನು ಹಣದ ಅನಿವಾರ್ಯತೆ ಇರಲಿಲ್ಲ...
ಮಗಳ ಉದ್ಯೋಗದ ನಿರ್ಧಾರದ ಬಗ್ಗೆ ನೆನೆದ ತಾಯಿ, "ಆಕೆ ಕೆಲಸಕ್ಕೆ ಹೋಗುತ್ತೇನೆ ಎಂದಾಗ ನಾನೇ ಬೇಡ ಅಂದಿದ್ದೆ. ಮನೆಯಲ್ಲೇ ಇರಲು ಹೇಳಿದ್ದೆ. ಆದರೆ, ಮನೆಯಲ್ಲೇ ಸುಮ್ಮನೆ ಕೂರಲು ಇಷ್ಟಪಡದ ಅವಳು, ಕೆಲಸಕ್ಕೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದಳು. ಕಲಿತ ಮಗಳು ಸುಮ್ಮನೆ ಇರುವುದು ಬೇಡ ಎಂಬ ಕಾರಣಕ್ಕೆ ಕೊನೆಗೆ ಒಪ್ಪಿ ಕೆಲಸಕ್ಕೆ ಕಳುಹಿಸಿದ್ದೆ. ನಮಗೆ ಆಕೆಯ ದುಡಿಮೆಯಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇರಲಿಲ್ಲ" ಎಂದು ಕಣ್ಣೀರಾದರು.
ಮಗಳ ಕನಸುಗಳೆಲ್ಲಾ ಮಣ್ಣಾದವು!
ಲಾವಣ್ಯ ತಾಯಿಯ ಪ್ರಕಾರ, ಮಗಳು ಪ್ರತಿಯೊಂದು ಸಣ್ಣ ವಿಷಯವನ್ನೂ ಮನೆಯವರೊಂದಿಗೆ ಹಂಚಿಕೊಳ್ಳುತ್ತಿದ್ದಳು. ಭವಿಷ್ಯದ ಬಗ್ಗೆ ನೂರಾರು ಸುಂದರ ಕನಸುಗಳನ್ನು ಕಂಡಿದ್ದ ಮಗಳು ಇಂದು ಹೆಣವಾಗಿ ಬಿದ್ದಿರುವುದನ್ನು ತಾಯಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. "ನನ್ನ ಮಗಳ ಕನಸುಗಳನ್ನೆಲ್ಲಾ ಹೊಸಕಿ ಹಾಕಿದ ಆ ನರಾಧಮನನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು, ಆತನಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಅವರು ಕಣ್ಣೀರು ಹಾಕುತ್ತಾ ಒತ್ತಾಯಿಸಿದ್ದಾರೆ.
