
ಬಂಟ್ವಾಳ: ಕರಾವಳಿಯನ್ನೇ ಬೆಚ್ಚಿಬೀಳಿಸಿದ ಕಲ್ಲಡ್ಕದ ಮೆಡಿಕಲ್ ಶಾಪ್ ಉದ್ಯೋಗಿ ಲಾವಣ್ಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಚೇತನ ಕರಾಳ ಇತಿಹಾಸ ಈಗ ಒಂದೊಂದಾಗಿ ಹೊರಬೀಳುತ್ತಿದೆ. ಕಳೆದ ಮೂರು ವರ್ಷಗಳಿಂದ ಆಕೆ ಅನುಭವಿಸಿದ ನರಕಯಾತನೆ ಹಾಗೂ ಆರೋಪಿಯ ಸೈಕೋ ವರ್ತನೆಯ ಸಂಪೂರ್ಣ ವಿವರಗಳು ತನಿಖೆ ವೇಳೆ ಲಭ್ಯವಾಗಿವೆ.
ಮೂರು ವರ್ಷಗಳ ಸರಣಿ ಕಿರುಕುಳ!
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ (ರೇಷ್ಮೆ ರೋಡ್ ಕರ್ಣಂತೋಡು) ನಿವಾಸಿಯಾದ ಚೇತನ್, ಕಳೆದ ಮೂರು ವರ್ಷಗಳಿಂದ ಲಾವಣ್ಯ ಬೆಂಬಿಡದೆ ಕಾಡುತ್ತಿದ್ದ. ಆಕೆಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಈತ, ತನ್ನನ್ನೇ ಮದುವೆಯಾಗಬೇಕೆಂದು ನಿರಂತರ ಒತ್ತಡ ಹೇರುತ್ತಿದ್ದ. ಆದರೆ ಲಾವಣ್ಯ ಈತನ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ಚೇತನ್, ದಿನನಿತ್ಯ ಮೊಬೈಲ್ ಸಂದೇಶಗಳ (Messages) ಮೂಲಕ ಆಕೆಗೆ ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಅಂಗಡಿಗೆ ನುಗ್ಗಿ ದಾಂಧಲೆ ಮಾಡಿದ್ದ ಆರೋಪಿ
ಆರೋಪಿಯ ಉನ್ಮಾದ ಇಷ್ಟಕ್ಕೇ ನಿಂತಿರಲಿಲ್ಲ. ಈ ಹಿಂದೆ ಲಾವಣ್ಯ ಕೆಲಸ ಮಾಡುತ್ತಿದ್ದ ಪುಷ್ಪರಾಜ್ ಮೆಡಿಕಲ್ ಅಂಗಡಿಗೆ ನುಗ್ಗಿದ್ದ ಚೇತನ್, "ನಾನು ಹೇಳಿದ ಮೇಲೂ ಇಲ್ಲಿಗೆ ಯಾಕೆ ಕೆಲಸಕ್ಕೆ ಬಂದೆ?" ಎಂದು ಗಲಾಟೆ ಮಾಡಿದ್ದ. ಅಂಗಡಿಯ ಗ್ಲಾಸ್‌ಗಳನ್ನು ಪುಡಿಪುಡಿ ಮಾಡಿ ದಾಂಧಲೆ ನಡೆಸಿದ್ದ. ಈ ವೇಳೆ ಅಲ್ಲಿದ್ದ ವೈದ್ಯರು ಪೊಲೀಸರಿಗೆ ದೂರು ನೀಡಲು ಮುಂದಾದಾಗ, "ಪೊಲೀಸರು ಬಂದ್ರೂ ನನಗೇನೂ ಮಾಡಕ್ಕಾಗಲ್ಲ" ಎಂದು ಸವಾಲು ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದ ಎನ್ನಲಾಗಿದೆ.
ಬೆಂಗಳೂರಿಗೆ ಹೋಗುವುದಾಗಿ ಸುಳ್ಳು ಹೇಳಿದ್ದ!
ಇತ್ತೀಚೆಗಷ್ಟೇ ವಿದ್ಯಾಭ್ಯಾಸ ಮುಗಿಸಿದ್ದ ಚೇತನ್, ಈ ಭೀಕರ ಕೃತ್ಯ ಎಸಗುವ ಮೂರು ದಿನಗಳ ಮುಂಚೆ, "ನಾನು ಕೆಲಸ ಹುಡುಕಲು ಬೆಂಗಳೂರಿಗೆ ಹೋಗುತ್ತಿದ್ದೇನೆ" ಎಂದು ತನ್ನ ಹೆತ್ತವರಿಗೆ ಸುಳ್ಳು ಹೇಳಿ ಮನೆಯಿಂದ ಹೊರಟಿದ್ದ. ಆದರೆ ಆತನ ತಲೆಯಲ್ಲಿ ಓಡುತ್ತಿದ್ದುದೇ ಬೇರೆ ಸ್ಕೆಚ್ ಆಗಿತ್ತು.
"ನಿಮ್ಮ ಮಗಳನ್ನು ಕೊಂದಿದ್ದೇನೆ" - ಹೆತ್ತವರಿಗೇ ಫೋನ್ ಮಾಡಿದ ಹಂತಕ!
ಹತ್ಯೆ ನಡೆದ ದಿನವೂ ಚೇತನ್ ಮೆಸೇಜ್ ಮಾಡಿ ಬೆದರಿಕೆ ಹಾಕಿದ್ದ. "ನಾನು ಕಾರಿನಲ್ಲಿ ಕಲ್ಲಡ್ಕಕ್ಕೆ ಬರುತ್ತಿದ್ದೇನೆ, ನೀನು ನನ್ನ ಜೊತೆ ಬರಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇನೆ" ಎಂದು ಹೆದರಿಸಿದ್ದ. ಇದಕ್ಕೆ ಲಾವಣ್ಯ ಪ್ರತಿಕ್ರಿಯಿಸಿರಲಿಲ್ಲ. ಸಂಜೆ ವೇಳೆ ಮೆಡಿಕಲ್ ಅಂಗಡಿ ಬಳಿ ಚೇತನ್ ಕಾರಿನಲ್ಲಿ ಹೊಂಚು ಹಾಕಿ ಕುಳಿತಿದ್ದನ್ನು ಗಮನಿಸಿದ ಲಾವಣ್ಯ, ಆತಂಕದಿಂದ ಈ ವಿಷಯವನ್ನು ತನ್ನ ಸ್ನೇಹಿತೆಗೆ ತಿಳಿಸಿದ್ದಳು. ಆದರೆ ಅಷ್ಟರಲ್ಲೇ ಆರೋಪಿ ಆಕೆಯ ಮೇಲೆರಗಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ರಕ್ತಪಿಪಾಸು ಚೇತನ ಕ್ರೌರ್ಯ ಇಲ್ಲಿಗೂ ನಿಲ್ಲಲಿಲ್ಲ. ಲಾವಣ್ಯಳನ್ನು ಹತ್ಯೆ ಮಾಡಿದ ಬೆನ್ನಲ್ಲೇ ಆಕೆಯ ಪೋಷಕರಿಗೆ ಫೋನ್ ಮಾಡಿದ ಆರೋಪಿ, "ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ, ಇನ್ನು ನಾಳೆ ನನ್ನ ಹೆಣ ಸಿಗುತ್ತದೆ" ಎಂದು ಅಹಂಕಾರದಿಂದಲೇ ಹೇಳಿ ಫೋನ್ ಕಟ್ ಮಾಡಿದ್ದಾನೆ.
ಸದ್ಯ ಈ ಘಟನೆ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾಮುಕ ಹಾಗೂ ಹಂತಕ ಚೇತನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.