ದಕ್ಷಿಣ ಕನ್ನಡ

Belthangady: ಕಟಪಾಡಿಯಲ್ಲಿ ಕಳವಾಗಿದ್ದ ಆಟೋ ರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ: ಕೀಲಿ ಕೈ ಬಿಟ್ಟು ಹೋಗಿದ್ದೇ ಕಳ್ಳತನಕ್ಕೆ ಕಾರಣ!


ಬೆಳ್ತಂಗಡಿ: ಉಡುಪಿ ಜಿಲ್ಲೆಯ ಕಟಪಾಡಿಯಿಂದ ಕಳವಾಗಿದ್ದ ಆಟೋ ರಿಕ್ಷಾವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಗರದ ಮೂರುಮಾರ್ಗ ಎಂಬಲ್ಲಿ ಪತ್ತೆಯಾಗಿದೆ. ಕಟಪಾಡಿ ನಿವಾಸಿ ಮೊಹಮ್ಮದ್ ಆಸಿಫ್ ಎಂಬುವವರಿಗೆ ಸೇರಿದ ರಿಕ್ಷಾ ಇದಾಗಿದ್ದು, ಭಾನುವಾರ ರಾತ್ರಿ ಕಳ್ಳತನವಾಗಿತ್ತು. ತದನಂತರ ಸೋಮವಾರದಂದು ಇದು ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ.

ಹೋಟೆಲ್ ಮಾಲೀಕನ ಸಮಯಪ್ರಜ್ಞೆ, ಪೊಲೀಸರ ತನಿಖೆ

​ಬೆಳ್ತಂಗಡಿಯ ಮೂರುಮಾರ್ಗ ಜಂಕ್ಷನ್ ಬಳಿ ಅಪರಿಚಿತ ಆಟೋ ರಿಕ್ಷಾವೊಂದು ದೀರ್ಘಸಮಯದಿಂದ ನಿಂತಿರುವುದನ್ನು ಗಮನಿಸಿದ ಸ್ಥಳೀಯ ಹೋಟೆಲ್ ಮಾಲೀಕರೊಬ್ಬರು ತಕ್ಷಣವೇ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ವಿಶೇಷ ಆ್ಯಪ್ ಮೂಲಕ ವಾಹನದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು ಕಟಪಾಡಿಯ ಮೊಹಮ್ಮದ್ ಆಸಿಫ್ ಅವರಿಗೆ ಸೇರಿದ್ದು ಎಂಬುದು ದೃಢಪಟ್ಟಿದೆ. ತಕ್ಷಣವೇ ಆಸಿಫ್ ಅವರನ್ನು ಸಂಪರ್ಕಿಸಿದ ಪೊಲೀಸರು, ಬೆಳ್ತಂಗಡಿಗೆ ಕರೆಸಿಕೊಂಡು ವಾಹನವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಕಳ್ಳತನ ನಡೆದಿದ್ದು ಹೇಗೆ?

​ಲಭ್ಯವಿರುವ ಮಾಹಿತಿ ಪ್ರಕಾರ, ಆಟೋ ರಿಕ್ಷಾ ಮಾಲೀಕ ಆಸಿಫ್ ಅವರು ಭಾನುವಾರ ಸಂಜೆ ಕುಟುಂಬದೊಂದಿಗೆ ಬೀಚ್‌ಗೆ ತೆರಳಿದ್ದರು. ಪ್ರವಾಸ ಮುಗಿಸಿ ರಾತ್ರಿ ಮನೆಗೆ ಮರಳಿದಾಗ, ಅವರು ಆಕಸ್ಮಿಕವಾಗಿ ಆಟೋ ರಿಕ್ಷಾದ ಕೀಲಿಯನ್ನು ವಾಹನದಲ್ಲೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಕಳ್ಳ, ಅತ್ಯಂತ ಸುಲಭವಾಗಿ ರಿಕ್ಷಾವನ್ನು ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಗ್ಯಾಸ್ ಖಾಲಿಯಾಗಿ ವಾಹನ ಬಿಟ್ಟು ಓಡಿದ ಖದೀಮ!

​ಈ ಆಟೋ ರಿಕ್ಷಾವು ಗ್ಯಾಸ್ (LPG) ಇಂಧನದ ಮೂಲಕ ಚಲಿಸುತ್ತಿತ್ತು. ಕಟಪಾಡಿಯಿಂದ ಬೆಳ್ತಂಗಡಿಯವರೆಗೆ ಸಾಗುವಷ್ಟರಲ್ಲಿ ವಾಹನದ ಇಂಧನ ಸಂಪೂರ್ಣವಾಗಿ ಖಾಲಿಯಾಗಿದೆ. ಮುಂದೆ ಚಲಿಸಲು ಸಾಧ್ಯವಾಗದಿದ್ದಾಗ ಕಳ್ಳನು ರಿಕ್ಷಾವನ್ನು ರಸ್ತೆ ಬದಿಯಲ್ಲೇ ಬಿಟ್ಟು ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಪರಿಶೀಲನೆ ನಡೆಸಿದಾಗ ಆಟೋದೊಳಗೆ ಒಂದು ಡೀಸೆಲ್ ಕ್ಯಾನ್ ಹಾಗೂ ಬೀಗ ಪತ್ತೆಯಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.



image