ದಕ್ಷಿಣ ಕನ್ನಡ

ಮಂಗಳೂರು:ನಾಗುರಿಯಲ್ಲಿ ಧರೆಗುರುಳಿದ ಕಾಂಪೌಂಡ್ ಗೋಡೆ: ಮೂವರ ದಾರುಣ ಸಾವು, ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ

 
ಮಂಗಳೂರು: ಕರಾವಳಿಯಲ್ಲಿ ವರದಿಯಾಗುತ್ತಿರುವ ಭಾರಿ ಮಳೆಯು ತೀವ್ರ ಸ್ವರೂಪದ ದುರಂತವೊಂದಕ್ಕೆ ಕಾರಣವಾಗಿದೆ. ಇಲ್ಲಿನ ನಾಗುರಿ ಎಂಬಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಹಿಂಬದಿಯ ಬೃಹತ್ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ, ಮೂವರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ದುರಂತದ ವೇಳೆ ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ತುರ್ತು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಣ್ಣಿನ ಗೋಡೆಯ ಮೇಲೆ ಬಿದ್ದ ಕಾಂಪೌಂಡ್!          ಮಳೆಯ ಆರ್ಭಟಕ್ಕೆ ತಡೆಗೋಡೆ ಕುಸಿದು, ನೇರವಾಗಿ ಪಕ್ಕದಲ್ಲೇ ಇದ್ದ ಹಳೆಯ ಮಣ್ಣಿನ ಗೋಡೆಯ ಮನೆಯ ಮೇಲೆ ಬಿದ್ದಿದೆ. ಪರಿಣಾಮವಾಗಿ ಮನೆ ಸಂಪೂರ್ಣ ಜಖಂಗೊಂಡಿದ್ದು, ಒಳಗಿದ್ದವರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತಾದರೂ, ಅಷ್ಟರಲ್ಲೇ ಮೂವರು ದುರಂತ ಅಂತ್ಯ ಕಂಡಿದ್ದಾರೆ.

ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು            ದುರಂತದ ತೀವ್ರತೆಗೆ ಕಂಬನಿ ಮಿಡಿದ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ತದನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇದು ಮಂಗಳೂರಿನ ಪಾಲಿಗೆ ಅತ್ಯಂತ ದುಃಖದಾಯಕ ಮತ್ತು ಆಘಾತಕಾರಿ ಘಟನೆಯಾಗಿದೆ. ಭೀಕರ ಮಳೆಯಿಂದಾಗಿ ತಡೆಗೋಡೆ ಕುಸಿದು ಹಳೆಯ ಮನೆಯ ಮೇಲೆ ಬಿದ್ದಿದ್ದರಿಂದ ಈ ಭೀಕರ ಅನಾಹುತ ಸಂಭವಿಸಿದೆ" ಎಂದು ವಿಷಾದಿಸಿದರು.

"ಪೊಲೀಸ್ ಇಲಾಖೆ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಮೂವರು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾನು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ಅವರಿಗೆ ಸೂಕ್ತ ವೈದ್ಯಕೀಯ ನೆರವು ಸಿಗುವಂತೆ ಕ್ರಮ ಕೈಗೊಳ್ಳಲಿದ್ದೇನೆ" ಎಂದು ಶಾಸಕರು ಇದೇ ವೇಳೆ ಭರವಸೆ ನೀಡಿದರು.

ಸ್ಥಳದಲ್ಲಿ ಸದ್ಯ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.



image