
ಉಡುಪಿ:ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗವಾಗಿರುವ ಪ್ರಕರಣದ ಕುರಿತು ಯಾರೂ ಸುಮ್ಮನೆ ಕುಳಿತಿಲ್ಲ. ಈ ಘಟನೆಯಿಂದ ಇಡೀ ದೇಶಕ್ಕೆ, ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ತೀವ್ರ ನೋವಾಗಿದೆ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ರಾಮಮಂದಿರವು ಕೋಟ್ಯಂತರ ಹಿಂದೂಗಳ ಪರಮ ಪವಿತ್ರ ಶ್ರದ್ಧಾಕೇಂದ್ರವಾಗಿದೆ. ಅಲ್ಲಿ ನಡೆದಿರುವ ಅಕ್ರಮವನ್ನು ಯಾರೂ ಸಮರ್ಥಿಸುವುದಿಲ್ಲ. ಈಗಾಗಲೇ ಆರೋಪಿಗಳ ವಿರುದ್ಧ ತಕ್ಷಣದ ಬಂಧನ ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿಗಳೂ ಕೂಡ ಸ್ಪಷ್ಟಪಡಿಸಿದ್ದಾರೆ" ಎಂದರು.
ಶಾಸಕ ಪ್ರದೀಪ್ ಈಶ್ವರ್ ವರ್ತನೆಗೆ ಕೋಟ ಆಕ್ಷೇಪ
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖಂಡಿಸಿದ ಸಂಸದರು, "ಚಪ್ಪಲಿ ಎಸೆದಿರುವುದು ಖಂಡಿತವಾಗಿಯೂ ತಪ್ಪು, ಅದನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ, ಆಡಳಿತ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರೊಬ್ಬರು ಸಾರ್ವಜನಿಕವಾಗಿ ಪ್ರಚೋದನಾತ್ಮಕವಾಗಿ ವರ್ತಿಸುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದರು.
ಕಾರಿನ ಮೇಲೆ ನಿಂತು ತೊಡೆ ತಟ್ಟಿ, ಭುಜ ತಟ್ಟಿ ಜನರನ್ನು ಪ್ರಚೋದಿಸುವುದು ಸರಿಯಾದ ಕ್ರಮವಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ತಮ್ಮ ಪಕ್ಷದ ಶಾಸಕರಿಗೆ ಶಿಸ್ತು ಮತ್ತು ಬುದ್ಧಿ ಹೇಳುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವರು 'ರಾಜ್ಯಧರ್ಮ' ಪಾಲಿಸಲಿ!
ಇದೇ ವೇಳೆ ಪೊಲೀಸರ ಏಕಪಕ್ಷೀಯ ಕ್ರಮದ ವಿರುದ್ಧ ಕಿಡಿಕಾರಿದ ಕೋಟ ಶ್ರೀನಿವಾಸ ಪೂಜಾರಿ, "ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ (Sua Moto) ಪ್ರಕರಣ ದಾಖಲಿಸಿದ್ದಾರೆ. ಆದರೆ, ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣರಾದ ಮತ್ತು ಪ್ರಚೋದನೆ ನೀಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಗೃಹ ಸಚಿವರು ರಾಜಕೀಯ ಬದಿಗಿಟ್ಟು 'ರಾಜ್ಯಧರ್ಮ' ಪಾಲಿಸಬೇಕು. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು" ಎಂದು ಒತ್ತಾಯಿಸಿದರು.
ಆಡಿಯೋ ವಿವಾದ ಹಾಗೂ ಕ್ರಾಸ್ ವೋಟಿಂಗ್ ಬಗ್ಗೆ ಪ್ರತಿಕ್ರಿಯೆ
ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೋ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, "ಸ್ವತಃ ಸದಾನಂದ ಗೌಡರೇ ಆ ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಆ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ" ಎಂದರು. ಇನ್ನು ರಾಜ್ಯಸಭೆ ಅಡ್ಡ ಮತದಾನ (Cross Voting) ಪ್ರಕರಣದಲ್ಲಿ ಸಣ್ಣಪುಟ್ಟ ಗೊಂದಲಗಳಾಗಿದ್ದು, ಈ ಬಗ್ಗೆ ಪಕ್ಷದ ಹೈಕಮಾಂಡ್ ಈಗಾಗಲೇ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕರೊಬ್ಬರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ವಿಚಾರದ ಬಗ್ಗೆ ಮಾತನಾಡಿ, "ಅದು ಅವರ ವೈಯಕ್ತಿಕ ನಂಬಿಕೆ ಮತ್ತು ಭಾವನೆಗೆ ಸಂಬಂಧಿಸಿದ್ದು. ತಾವು ಯಾವುದೇ ತಪ್ಪು ಮಾಡಿಲ್ಲ ಎಂಬ ನಿಲುವನ್ನು ಅವರು ದೇವರ ಮುಂದೆ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ" ಎಂದರು.
ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯನ್ನು ಸಂಸದರು ತೀವ್ರವಾಗಿ ಖಂಡಿಸಿದರು. "ನಾವು-ನೀವು ಹುಟ್ಟುವುದಕ್ಕಿಂತ ಮುಂಚೆಯೇ, ಅಂದರೆ ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಹೆಮ್ಮೆಯ ಸಂಘಟನೆ ಆರ್‌ಎಸ್‌ಎಸ್. ಇದು ಜಾತಿ-ಧರ್ಮಗಳನ್ನು ಮೀರಿ 'ದೇಶ ಮೊದಲು' ಎಂಬ ತತ್ವದಡಿ ರಾಷ್ಟ್ರಭಕ್ತಿಯನ್ನು ಬೆಳೆಸುತ್ತಿರುವ ಸಂಸ್ಥೆಯಾಗಿದೆ" ಎಂದರು.
ಹಿಂದೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಸಹ ಆರ್‌ಎಸ್‌ಎಸ್ ದೇಶಪ್ರೇಮವನ್ನು ಮೆಚ್ಚಿಕೊಂಡಿದ್ದರು. ಗಣರಾಜ್ಯೋತ್ಸವದ ಪಥಸಂಚಲನದಲ್ಲೂ ಸಂಘದ ಸ್ವಯಂಸೇವಕರು ಸಮವಸ್ತ್ರ ಧರಿಸಿ ಪಾಲ್ಗೊಂಡ ಇತಿಹಾಸವಿದೆ. ಹೀಗಿರುವಾಗ ಸಚಿವರು ಆರ್‌ಎಸ್‌ಎಸ್ ನೋಂದಣಿ ಬಗ್ಗೆ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಹಾಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರ ಹಿಂದಿನ ಅವಧಿಯಲ್ಲಿ ಇಂತಹ ದ್ವೇಷದ ಪರಿಸ್ಥಿತಿ ಇರಲಿಲ್ಲ. ಆಗ ರಾಜ್ಯದ 500ಕ್ಕೂ ಹೆಚ್ಚು ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನಗಳು ಅತ್ಯಂತ ಶಾಂತಿಯುತವಾಗಿ ನಡೆದಿದ್ದವು, ಎಲ್ಲೂ ಗೊಂದಲಕ್ಕೆ ಆಸ್ಪದವಿರಲಿಲ್ಲ ಎಂದು ಕೋಟ ನೆನಪಿಸಿದರು.