ಬೆಂಗಳೂರು: ಹೆತ್ತ ತಂದೆಯೇ ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ಸ್ವಂತ ಮಗಳ ಮೇಲೆ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ ನಡುಕ ಹುಟ್ಟಿಸುವ ಘಟನೆ ನಗರ ಹೊರವಲಯದ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ (ಸಹಾಯಕ ಪ್ರಾಧ್ಯಾಪಕಿ) ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಿ ದುರ್ಗ ಎಂಬುವವರೇ ಹಲ್ಲೆಗೊಳಗಾದ ದುರದೃಷ್ಟಕರ ಯುವತಿ. ಈಕೆಯ ತಂದೆ ನಾಗೇಂದ್ರ ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಪ್ರಿನ್ಸಿಪಾಲ್ ಕ್ಯಾಬಿನ್‌ನಲ್ಲೇ ನಡೆದ ದೌರ್ಜನ್ಯ!
ಜುಲೈ 25ರ ಮಧ್ಯಾಹ್ನ ಸುಮಾರು 3:00 ಗಂಟೆಯ ವೇಳೆಗೆ ಕಾಲೇಜಿಗೆ ಆಗಮಿಸಿದ ಆರೋಪಿ ನಾಗೇಂದ್ರ, "ನನ್ನ ಮಗಳನ್ನು ಭೇಟಿಯಾಗಬೇಕು" ಎಂದು ಹೇಳಿ ಪ್ರಿನ್ಸಿಪಾಲ್ ಕೊಠಡಿಗೆ ತೆರಳಿದ್ದಾನೆ. ಬಳಿಕ ಯಾರಿಗೂ ನಿರೀಕ್ಷೆಯಿಲ್ಲದಂತೆ ದಿಢೀರನೆ ಕ್ಯಾಬಿನ್‌ಗೆ ನುಗ್ಗಿ, ತಾನು ತಂದಿದ್ದ ಚಾಕುವಿನಿಂದ ಮಗಳ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಪಾತಕಿ ರೀತಿಯಲ್ಲಿ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.
ಪೊಲೀಸರಿಂದ ಪ್ರಕರಣ ದಾಖಲು, ಆರೋಪಿಗೆ ಬಲೆ
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಕಾಲೇಜು ಸಿಬ್ಬಂದಿ ರಾಜಾನುಕುಂಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ತಂದೆಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಕುಟುಂಬದ ಆಂತರಿಕ ಕಲಹವೇ ಈ ಕೃತ್ಯಕ್ಕೆ ಕಾರಣವೇ ಅಥವಾ ಬೇರೇನಾದರೂ ಹಿನ್ನೆಲೆ ಇದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ.
