ದಕ್ಷಿಣ ಕನ್ನಡ

ಚೇಳ್ಯಾರು: ಎಂಆರ್‌ಪಿಎಲ್ ಹಾಗೂ ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ಯಶಸ್ವಿ

ಮಂಗಳೂರು: ಸ್ವಚ್ಛತಾ ಪಾಕ್ಷಿಕ - 2026ರ ಅಂಗವಾಗಿ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL), ಚೇಳ್ಯಾರು ಗ್ರಾಮ ಪಂಚಾಯತ್, ವಿದ್ಯಾ ವಿಕಾಸ ಟ್ರಸ್ಟ್ ಹಾಗೂ ಮಂಗಳೂರಿನ ಕೆ. ಎಂ. ಸಿ. ಆಸ್ಪತ್ರೆ (ಅತ್ತಾವರ) ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ಮತ್ತು ಕಣ್ಣಿನ ತಪಾಸಣಾ ಶಿಬಿರವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.

ಚೇಳ್ಯಾರು ಕಾಲೊನಿಯ ಕಳುವಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಈ ಶಿಬಿರದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.ವಿವಿಧ ವಿಭಾಗಗಳ ತಜ್ಞರಿಂದ ತಪಾಸಣೆ                  ಶಿಬಿರದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ನುರಿತ ಹಾಗೂ ಪರಿಣಿತ ವೈದ್ಯರ ತಂಡವು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿತು. ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ, ಕಣ್ಣಿನ ವಿಭಾಗ, ಕಿವಿ-ಮೂಗು-ಗಂಟಲು (ENT) ವಿಭಾಗ, ಮಕ್ಕಳ ರೋಗ ವಿಭಾಗ, ಚರ್ಮ ರೋಗ ಹಾಗೂ ದಂತ ವಿಭಾಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಿದರು.ಗಣ್ಯರ ಉಪಸ್ಥಿತಿ                                         ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ (GM) ಮಂದಾರ ಕಾಳೆ, ಮ್ಯಾನೇಜರ್ ಕೇಶವ ಪಾಟಾಳಿ, ಪ್ರಮುಖರಾದ ಹರೀಶ್ ರಾವ್ ಹಾಗೂ ಚೇಳ್ಯಾರು ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಜಯಾನಂದ ಚೇಳ್ಯಾರು ಉಪಸ್ಥಿತರಿದ್ದರು.

​ಅಲ್ಲದೆ, ಕೆಎಂಸಿ ಆಸ್ಪತ್ರೆಯ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹರ್ಬರ್ಟ್ ಮರಿಯೊ ಪಿರೇರ, ಡಾ. ನವ್ಯ, ವಿದ್ಯಾ ವಿಕಾಸ ಟ್ರಸ್ಟಿನ ಉಪಾಧ್ಯಕ್ಷ ರಾಘವ ಸನಿಲ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಪೂಜಾರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಸಿ. ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದರು.



image