ಬಂಟ್ವಾಳ: ಬಿ.ಸಿ.ರೋಡ್‌ನಲ್ಲಿ ಇತ್ತೀಚೆಗೆ ಅತ್ಯಂತ ಅಮಾನುಷವಾಗಿ ಹತ್ಯೆಗೀಡಾದ ಯುವತಿ ಲಾವಣ್ಯ ಅವರ ನಿವಾಸಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭೇಟಿ ನೀಡಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅವರು, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಲಾವಣ್ಯ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಅಸೀಮ ದುಃಖದಲ್ಲಿದ್ದ ಪೋಷಕರಿಗೆ ಸಂಸದರು ಧೈರ್ಯ ತುಂಬಿದರು.
"ಈ ಕೃತ್ಯ ಎಸಗಿದ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸಲು ನಾವು ಬದ್ಧರಾಗಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಕಾನೂನಾತ್ಮಕ ಹೋರಾಟ ಹಾಗೂ ಪ್ರಯತ್ನಗಳನ್ನು ನಡೆಸಲಾಗುವುದು," ಎಂದು ಸಂಸದ ಚೌಟ ಅವರು ಇದೇ ವೇಳೆ ಭರವಸೆ ನೀಡಿದರು.
ಅಂತಿಮ ದರ್ಶನದ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು, ವಿವಿಧ ಪಕ್ಷಗಳ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
