ದಕ್ಷಿಣ ಕನ್ನಡ

ಕಾರ್ಕಳ: ಪೆರ್ವಾಜೆ ದೇವಸ್ಥಾನದ ಚೆಕ್ ನಕಲು ಮಾಡಿ ವಂಚನೆ ಯತ್ನ; ಮಾಜಿ ಸಿಬ್ಬಂದಿ ಅರೆಸ್ಟ್!

 


ಕಾರ್ಕಳ: ತಾಲೂಕಿನ ಪ್ರಸಿದ್ಧ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಚೆಕ್‌ಗಳಿಗೆ ನಕಲಿ ಸಹಿ ಹಾಕಿ ಲಕ್ಷಾಂತರ ರೂಪಾಯಿ ಹಣ ಎಗರಿಸಲು ಯತ್ನಿಸಿದ ಆರೋಪದಡಿ, ದೇವಸ್ಥಾನದ ಮಾಜಿ ಡಾಟಾ ಎಂಟ್ರಿ ಆಪರೇಟರ್‌ನನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ನಿವಾಸಿ ಅಕ್ಷಯ್ ದೇವಾಡಿಗ (29) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ:

​ಕರ್ನಾಟಕ ಸರ್ಕಾರದ ಧಾರ್ಮಿಕ ಮತ್ತು ದತ್ತಿ ಇಲಾಖೆಗೊಳಪಡುವ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರೋಪಿ ಅಕ್ಷಯ್, 2022ರ ಡಿಸೆಂಬರ್ 1ರಿಂದ 2026ರ ಮೇ 7ರವರೆಗೆ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಇಲಾಖೆಯ ವಾರ್ಷಿಕ ಲೆಕ್ಕ ಪರಿಶೋಧನೆ (ಆಡಿಟಿಂಗ್) ನಡೆದಾಗ ಕರ್ತವ್ಯ ಲೋಪ ಹಾಗೂ ಹಣಕಾಸಿನ ಅಕ್ರಮ ಎಸಗಿರುವುದು ಬಯಲಿಗೆ ಬಂದಿತ್ತು. ಈ ಕುರಿತು ಆಡಳಿತ ಮಂಡಳಿ ಸ್ಪಷ್ಟನೆ ಕೇಳಿದ್ದಕ್ಕೆ, ಯಾವುದೇ ಉತ್ತರ ನೀಡದೆ ಈತ ದಿಢೀರ್ ರಾಜೀನಾಮೆ ನೀಡಿ ಕೆಲಸದಿಂದ ದೂರ ಉಳಿದಿದ್ದ.

ಬ್ಯಾಂಕ್ ಸಿಬ್ಬಂದಿಯ ಜಾಗರೂಕತೆಯಿಂದ ಬಲೆಗೆ ಬಿದ್ದ:

​ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅಕ್ರಮ ಬುದ್ಧಿ ಬಿಡದ ಆರೋಪಿ, ದೇವಸ್ಥಾನದ ಹೆಸರಿನಲ್ಲಿದ್ದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಾಲ್ತಿ ಖಾತೆಯ ೬ ಚೆಕ್‌ಗಳನ್ನು ಕದ್ದು, ಜೂನ್ 24ರಂದು ನಗದೀಕರಣಕ್ಕಾಗಿ (Encashment) ಬ್ಯಾಂಕ್‌ಗೆ ಸಲ್ಲಿಸಿದ್ದ.

​ಚೆಕ್‌ನಲ್ಲಿದ್ದ ಸಹಿಯ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗೆ ಅನುಮಾನ ಮೂಡಿದೆ. ತಕ್ಷಣವೇ ಜಾಗರೂಕರಾದ ಬ್ಯಾಂಕ್ ಅಧಿಕಾರಿಗಳು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸಿ ಪರಿಶೀಲಿಸಿದಾಗ, ಅಧ್ಯಕ್ಷರ ಗಮನಕ್ಕೆ ತರದೆ ಅವರ ನಕಲಿ ಸಹಿ ಹಾಕಿ ಚೆಕ್ ನೀಡಿರುವುದು ಖಚಿತವಾಗಿದೆ.

​ಈ ಕೂಡಲೇ ದೇವಸ್ಥಾನದ ಮಂಡಳಿ ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



image