ಬೆಂಗಳೂರು: ರಾಜಧಾನಿಯ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಭೀಕರ ಕೃತ್ಯವೊಂದು ಬೆಳಕಿಗೆ ಬಂದಿದೆ. ಯುವತಿಯೋರ್ವಳನ್ನು ಭೀಕರವಾಗಿ ಹತ್ಯೆಗೈದು ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿರುವ ಘಟನೆ ನಡೆದಿದ್ದು, ಪತಿಯ ಮೇಲೆಯೇ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ಬಿಹಾರ ಮೂಲದ ರೀಮಾ ಕುಮಾರಿ (20) ಕೊಲೆಯಾದ ದೌರ್ಭಾಗ್ಯಪೂರ್ಣ ಮಹಿಳೆ. ಆಕೆಯ ಪತಿ ಧೀರಜ್ ಕುಮಾರ್ ಈ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ದುರ್ವಾಸನೆಯಿಂದ ಬಯಲಾಯ್ತು ಕೃತ್ಯ!
ಉದ್ಯೋಗ ಅರಸಿ ಬಿಕಾರಿಯಿಂದ ಆಗಮಿಸಿದ್ದ ಈ ದಂಪತಿ ಕಳೆದ ಒಂದು ವರ್ಷದಿಂದ ಗೇರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರೂ ಸ್ಥಳೀಯ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.
ಬುಧವಾರ ಸಂಜೆ ರೀಮಾ ಕುಮಾರಿಯ ಗೆಳತಿಯೊಬ್ಬಳು ಆಕೆಯ ಮನೆಗೆ ಬಂದಾಗ ತೀವ್ರ ರೀತಿಯ ದುರ್ವಾಸನೆ ಬಂದಿದೆ. ಅನುಮಾನಗೊಂಡ ಆಕೆ ಕೂಡಲೇ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಬಾಗಿಲು ತೆರೆದು ಪರಿಶೀಲಿಸಿದಾಗ ಶೌಚಾಲಯದ ಬಳಿ ಬೆಡ್‌ಶೀಟ್‌ನಲ್ಲಿ ಸುತ್ತಿಡಲಾಗಿದ್ದ ಸ್ಥಿತಿಯಲ್ಲಿ ರೀಮಾ ಅವರ ಮೃತದೇಹ ಪತ್ತೆಯಾಗಿದೆ.
ನಾಲ್ಕೈದು ದಿನಗಳ ಹಿಂದೆಯೇ ಹತ್ಯೆ?
ಕೂಡಲೇ ಕುಂಬಳಗೋಡು ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಮೃತದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಕೃತ್ಯ ನಡೆದು ನಾಲ್ಕೈದು ದಿನಗಳು ಕಳೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪತ್ತ್ನಿಯನ್ನು ಹತ್ಯೆ ಮಾಡಿದ ಬಳಿಕ ಶವವನ್ನು ಮುಚ್ಚಿಟ್ಟು ಪತಿ ಧೀರಜ್ ಕುಮಾರ್ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಕುರಿತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
