ದಕ್ಷಿಣ ಕನ್ನಡ

ಬಂಟ್ವಾಳ: ಮೊಡಂಕಾಪು ದೇವಸ್ಥಾನದಲ್ಲಿ ಕಳವು; ಬೆಳ್ಳಿ ವಸ್ತು, ಪೂಜಾ ಸಾಮಗ್ರಿಗಳೊಂದಿಗೆ ಪರಾರಿಯಾದ ಕಳ್ಳರು!

 


ಬಂಟ್ವಾಳ:ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ಮೌಲ್ಯದ ಪುರಾತನ ಪೂಜಾ ಸಾಮಗ್ರಿಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

​ದೇವಸ್ಥಾನದ ಮುಖ್ಯ ಪ್ರವೇಶ ದ್ವಾರದ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು, ಗರ್ಭಗುಡಿ ಹಾಗೂ ಸಭಾಂಗಣದಲ್ಲಿದ್ದ ಪೂಜಾ ದ್ರವ್ಯಗಳನ್ನು ದೋಚಿದ್ದಾರೆ. ದೇವತಾ ಕಾರ್ಯಗಳಿಗೆ ಬಳಸುತ್ತಿದ್ದ ಬೆಳ್ಳಿಯ ಅಭರಣ/ವಸ್ತುಗಳು, ಕಾಣಿಕೆ ಡಬ್ಬಿ, 10 ಸಾಂಪ್ರದಾಯಿಕ ದೀಪಗಳು, 10 ಹಿತ್ತಾಳೆ ಕಲಶಗಳು, 5 ಹಿತ್ತಾಳೆ ತಟ್ಟೆಗಳು, ತಾಮ್ರದ ಪಾತ್ರೆಗಳು, ಕಲಶ ಹಾಗೂ ಅಡುಗೆಗೆ ಬಳಸುವ ಉಕ್ಕಿನ ಪಾತ್ರೆಗಳನ್ನು ಕಳವು ಮಾಡಲಾಗಿದೆ.

​ದೋಚಲಾದ ಸಾಮಗ್ರಿಗಳ ಒಟ್ಟು ಮೌಲ್ಯ ಸುಮಾರು ₹57,000 ಎಂದು ಅಂದಾಜಿಸಲಾಗಿದೆ.

​ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

​ದೇವಸ್ಥಾನದ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರು ಶಂಕಿತ ಆರೋಪಿಗಳ ಚಲನವಲನಗಳು ಪತ್ತೆಯಾಗಿವೆ. ಕದ್ದ ವಸ್ತುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಜಾಗ ಖಾಲಿ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

​ಈ ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಸುನೀಲ್ ಕುಮಾರ್ ಕೆ.ಎನ್. ಅವರು ನೀಡಿದ ದೂರಿನನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.



image