ಉಡುಪಿ

​ ಕುಂದಾಪುರ : ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಹತ್ಯೆ: ಹಣಕಾಸು ಉದ್ಯಮಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿ!

 


ಕುಂದಾಪುರ: ಕರಾವಳಿಯಲ್ಲಿ ಬೆಳಗಿನ ಜಾವವೇ ಭೀಕರ ಕೊಲೆಯೊಂದು ನಡೆದಿದ್ದು, ಉದ್ಯಮಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಶುಕ್ರವಾರ ಮುಂಜಾನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಂಭವಿಸಿದೆ.

​ಕುಂದಾಪುರದ ಪ್ರಸಿದ್ಧ ಹೋಲಿ ರೋಸರಿ ಚರ್ಚ್ ಎದುರಿನ ರಸ್ತೆಯಲ್ಲಿ ಮುಂಜಾನೆ ಸುಮಾರು 3.30ರ ವೇಳೆಗೆ ಈ ದುರಂತ ನಡೆದಿದೆ. ಬಾರ್ಕೂರಿನ ಕಳ್ಳೂರು ನಿವಾಸಿ, ಹಣಕಾಸು ಉದ್ಯಮ ನಡೆಸುತ್ತಿದ್ದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದ ದುರದೃಷ್ಟಕರ ವ್ಯಕ್ತಿ.

ಘಟನೆಯ ವಿವರ:

​ಶುಕ್ರವಾರ ಮುಂಜಾನೆ ಐವನ್ ರಿಚರ್ಡ್ ಅವರು ಮಹಿಳೆಯೊಬ್ಬರ ಜೊತೆ ಕಾರಿನಲ್ಲಿ ಚರ್ಚ್ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಆರೋಪಿಯು ದಿಢೀರನೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿ ತೀವ್ರ ರಕ್ತಸ್ರಾವಕ್ಕೆ ಒಳಗಾದ ಐವನ್, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ತನಿಖೆ ಚುರುಕುಗೊಳಿಸಿದ ಪೊಲೀಸರು:

​ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದ ಮಹಿಳೆಗೆ ಆರೋಪಿಯ ಗುರುತು ತಿಳಿದಿದೆ ಎನ್ನಲಾಗಿದ್ದು, ಆಧಾರದ ಮೇಲೆ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ. ಹಣಕಾಸಿನ ವಹಿವಾಟು ಅಥವಾ ಹಳೆಯ ವೈಯಕ್ತಿಕ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

​ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯಕ್, ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್‌ಸ್ಪೆಕ್ಟರ್ ಜಯರಾಮ ಗೌಡ ಹಾಗೂ ಪಿಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ ಮತ್ತು ಅನೂಪ್ ನಾಯಕ್ ಅವರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ತನಿಖೆ ಚುರುಕುಗೊಂಡಿದೆ.



image