ಉಪ್ಪಿನಂಗಡಿ/ಬಂಟ್ವಾಳ:ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಿ.ಸಿ.ರೋಡ್ ಬಸ್ ನಿಲ್ದಾಣದ ಲಾವಣ್ಯ ಭೀಕರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರವನ್ನು ಖರೀದಿಸಿದ ಸ್ಥಳಕ್ಕೆ ಆರೋಪಿ ಚೇತನ್‌ನನ್ನು ಕರೆತಂದು ಪೊಲೀಸರು ಬುಧವಾರ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಕಳೆದ ಜುಲೈ 16ರಂದು ಯುವತಿ ಲಾವಣ್ಯಳನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಮುಖ್ಯ ಆರೋಪಿ ಚೇತನ್, ಕೃತ್ಯಕ್ಕೆ ಬಳಸಿದ್ದ ಉದ್ದನೆಯ ಕತ್ತಿಯನ್ನು ಉಪ್ಪಿನಂಗಡಿಯ ಅಂಗಡಿಯೊಂದರಲ್ಲಿ ಖರೀದಿಸಿದ್ದ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತನಿಖಾ ತಂಡ ಆತನನ್ನು ಸ್ಥಳಕ್ಕೆ ಕರೆತಂದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಯ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿ ಅಂಗಡಿಗೆ ಕರೆತರಲಾಗಿತ್ತು.
ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಕೃತ್ಯದ ಪೂರ್ವತಯಾರಿ!
ವರದಿಗಳ ಪ್ರಕಾರ, ಕೊಲೆ ನಡೆಯುವ ಹಿಂದಿನ ದಿನ ಅಂದರೆ ಜುಲೈ 15ರಂದೇ ಆರೋಪಿ ಚೇತನ್ ಉಪ್ಪಿನಂಗಡಿಗೆ ಆಗಮಿಸಿದ್ದ. ಅಲ್ಲಿನ ಕೃಷಿ ಉಪಕರಣಗಳ ಮಾರಾಟ ಮಳಿಗೆಯೊಂದಕ್ಕೆ ತೆರಳಿ, ಕೃಷಿ ಕಾರ್ಯಕ್ಕೆ ಬಳಸುವ ಉದ್ದನೆಯ ಕತ್ತಿಯ ದರ ವಿಚಾರಿಸಿದ್ದ. ಬಳಿಕ ಇತರ ಕಡೆಗಳಲ್ಲಿ ವಿಚಾರಿಸುವ ನೆಪದಲ್ಲಿ ಹೊರಹೋಗಿ, ಮತ್ತೆ ಅದೇ ಅಂಗಡಿಗೆ ಮರಳಿ ಬಂದು ಕತ್ತಿಯನ್ನು ಖರೀದಿಸಿದ್ದ.
ಮಾರಕಾಸ್ತ್ರವನ್ನು ಕಾಗದದಿಂದ ಪ್ಯಾಕ್ ಮಾಡಿಸಿ ಅಂಗಡಿಯಲ್ಲೇ ಕೆಲಕಾಲ ಇರಿಸಿ ಹೊರಹೋಗಿದ್ದ ಆತ, ನಂತರ ಮರಳಿ ಬಂದು ಅದನ್ನು ಒಯ್ದಿದ್ದ ದೃಶ್ಯಗಳು ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಈ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ.
