ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ (ANI)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಶಂಕಿತ ಭಯೋತ್ಪಾದಕರು ನಡೆಸಿದ ದಿಢೀರ್ ಗುಂಡಿನ ದಾಳಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ವೀರಮರಣ ಅಪ್ಪಿದ್ದಾರೆ.
ಅನಂತ್‌ನಾಗ್‌ನ ಪ್ರಮುಖ ಪ್ರದೇಶವಾದ ಲಾಲ್ ಚೌಕ್‌ನಲ್ಲಿ ಬುಧವಾರ ಮಧ್ಯಾಹ್ನ ಸುಮಾರು 12:30 ರ ವೇಳೆಗೆ ಈ ಘಟನೆ ಸಂಭವಿಸಿದೆ. ಪ್ರಸ್ತುತ ನಡೆಯುತ್ತಿರುವ ಅಮರನಾಥ ಯಾತ್ರೆಯ ಭದ್ರತಾ ಉಸ್ತುವಾರಿಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಆಶಿಕ್ ಹುಸೇನ್ ಖುರೇಷಿ ಅವರು ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ದಾಳಿಯ ಹೊಣೆ ಹೊತ್ತ 'ಟಿಆರ್‌ಎಫ್' ಉಗ್ರ ಸಂಘಟನೆ
ವೀರಮರಣ ಹೊಂದಿದ ಆಶಿಕ್ ಹುಸೇನ್ ಅವರು ಮಧ್ಯ ಕಾಶ್ಮೀರದ ಬುಡ್‌ಗಾಮ್ ಜಿಲ್ಲೆಯ ಬೀರ್ವಾ ನಿವಾಸಿಯಾಗಿದ್ದು, ಬುಡ್‌ಗಾಮ್‌ನ ಐಆರ್‌ಪಿ (IRP) 3ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಭೀಕರ ದಾಳಿಯ ಹೊಣೆಯನ್ನು ಲಷ್ಕರ್-ಎ-ತೈಬಾ (LeT) ಉಗ್ರ ಸಂಘಟನೆಯ ಉಪ-ಸಂಸ್ಥೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಸೋಶಿಯಲ್ ಮೀಡಿಯಾ ಮೂಲಕ ವಹಿಸಿಕೊಂಡಿದೆ.
ಘಟನೆ ಬೆನ್ನಲ್ಲೇ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಪರಾರಿಯಾಗಿರುವ ಉಗ್ರರಿಗಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಕಣಿವೆಯಲ್ಲಿ ಮುಂದುವರಿದ ಉಗ್ರ ನಿಗ್ರಹ ಕಾರ್ಯಾಚರಣೆ
ಕಳೆದ ಕೆಲವು ಸಮಯದಿಂದ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಚಟುವಟಿಕೆಗಳು ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದ್ದರೂ, ಇತ್ತೀಚೆಗೆ ಜಮ್ಮು ವಿಭಾಗದ ಅಡವಿ ಪ್ರದೇಶಗಳಲ್ಲಿ ಅಡಗಿರುವ ಉಗ್ರರನ್ನು ಮಟ್ಟಹಾಕಲು ಸೇನೆಯು ಸುದೀರ್ಘ ಕೌಂಟರ್-ಟೆರರಿಸಂ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.
ಇನ್ನೊಂದೆಡೆ, ಸಾಂಬಾ ಮತ್ತು ರಾಜೌರಿ ಗಡಿ ಭಾಗಗಳಲ್ಲಿ ಕಠಿಣ ಹವಾಮಾನ ಹಾಗೂ ಭೌಗೋಳಿಕ ಸವಾಲುಗಳ ನಡುವೆಯೂ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ಬುಧವಾರ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LoC) ಬಳಿ ಎತ್ತರದ ಪ್ರದೇಶದಿಂದ ಆಕಸ್ಮಿಕವಾಗಿ ಜಾರಿ ಬಿದ್ದು ಸೇನಾ ಯೋಧರೊಬ್ಬರು ಪ್ರಾಣತ್ಯಾಗ ಮಾಡಿದ್ದಾರೆ.
ಹವಾಮಾನ ವೈಪರೀತ್ಯ: ಅಮರನಾಥ ಯಾತ್ರೆ ಸದ್ಯಕ್ಕೆ ಸ್ಥಗಿತ
ದಾಳಿಯ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಪ್ರತಿಕೂಲ ಹವಾಮಾನದಿಂದಾಗಿ ಜುಲೈ 19 ರಿಂದಲೇ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಾದ್ಯಂತ ಸುರಿಯುತ್ತಿರುವ ಭಾರೀ ಮಳೆ, ಭೂಕುಸಿತ ಹಾಗೂ ಪ್ರವಾಹದ ಸ್ಥಿತಿಯಿಂದಾಗಿ ಜಮ್ಮು, ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಜನಜೀವನ ತಸ್ತಪುರಗೊಂಡಿದೆ.
