ಬೆಳ್ತಂಗಡಿ: ಇತ್ತೀಚೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಯಲಾಗಿದ್ದ ನಕಲಿ ನೋಟು ಮುದ್ರಣ ಜಾಲದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಇದೀಗ ಗುರುವಾಯನಕೆರೆಯ ಅಪಾರ್ಟ್‌ಮೆಂಟ್ ಒಂದರ ಮೇಲೆ ದಾಳಿ ನಡೆಸಿ ಮಹತ್ವದ ಪರಿಶೀಲನೆ ನಡೆಸಿದ್ದಾರೆ.
ಕಾಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಜುಲೈ 15ರ ರಾತ್ರಿ ನಕಲಿ ನೋಟು ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ವೇಳೆ ಜಾಲದ ಅಸಲಿ ಕೃತ್ಯಗಳು ಬೆಳಕಿಗೆ ಬಂದಿವೆ.
ಬಾಡಿಗೆ ಮನೆಯಲ್ಲಿ ನಡೆದಿತ್ತು ಮಾಸ್ಟರ್ ಪ್ಲಾನ್!
ಬಂಧಿತ ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಅವರು ಉಪ್ಪಿನಂಗಡಿಗೆ ಸ್ಥಳಾಂತರಗೊಳ್ಳುವ ಮುನ್ನ ಬೆಳ್ತಂಗಡಿಯ ಎರಡು ಬಾಡಿಗೆ ಮನೆಗಳಲ್ಲಿ ಖೋಟಾ ನೋಟು ಪ್ರಿಂಟ್ ಮಾಡಲು ಸಕಲ ತಯಾರಿ ನಡೆಸಿದ್ದಾಗಿ ಬಾಯಿಬಿಟ್ಟಿದ್ದಾರೆ.
ನ್ಯಾಯಾಲಯದ ಸರ್ಚ್ ವಾರಂಟ್‌ನೊಂದಿಗೆ ದಾಳಿ
ಪ್ರಕರಣದ ಪ್ರಮುಖ ಆರೋಪಿ, ಉತ್ತರ ಕನ್ನಡ ಜಿಲ್ಲೆಯ ಸಂದೀಪ್ ಪುಂಡಲೀಕ ಶೋಳಂಬಿ (30) ನೀಡಿದ ಖಚಿತ ಮಾಹಿತಿ ಆಧರಿಸಿ, ಪೊಲೀಸರು ಕಾರ್ಯಾಚರಣೆ ರೂಪಿಸಿದ್ದರು. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ರಸ್ತೆಯಲ್ಲಿರುವ ಅಬ್ದುಲ್ ಶಕಿಲ್ ಅವರಿಗೆ ಸೇರಿದ 'ಬಿ.ಎ. ಅಪಾರ್ಟ್‌ಮೆಂಟ್'ಗೆ ಆರೋಪಿಯನ್ನು ಕರೆತಂದ ಪೊಲೀಸರು, ಬೆಳ್ತಂಗಡಿ ನ್ಯಾಯಾಲಯದಿಂದ ಪಡೆದ ಸರ್ಚ್ ವಾರಂಟ್‌ನೊಂದಿಗೆ ಬೆಳಿಗ್ಗೆ 9 ಗಂಟೆಗೆ ದಾಳಿ ನಡೆಸಿದ್ದಾರೆ.
ಅಪಾರ್ಟ್‌ಮೆಂಟ್‌ನ 101 ಮತ್ತು 108 ಸಂಖ್ಯೆಯ ಫ್ಲ್ಯಾಟ್‌ಗಳ ಮೇಲೆ ಈ ದಾಳಿ ನಡೆದಿದ್ದು, ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿನಿ ಸಿ.ಕೆ. ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ತಂಡ ತೀವ್ರ ಶೋಧ ಕಾರ್ಯ ನಡೆಸಿದೆ. ಈ ಜಾಲದ ಹಿಂದೆ ಇನ್ನಷ್ಟು ಪ್ರಭಾವಿಗಳ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
