ಬಂಟ್ವಾಳ (ಜುಲೈ 20): ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಬಿದ್ದ ಪರಿಣಾಮ, ವಾಹನದಲ್ಲಿದ್ದ ಪುಟ್ಟ ಮಗು ಸೇರಿದಂತೆ ಮೂವರು ಅಪಾಯಕ್ಕೆ ಸಿಲುಕಿದ ಘಟನೆ ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಆದರೆ, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸಮಯೋಚಿತ ಕಾರ್ಯಾಚರಣೆ:
ಅಪಘಾತ ಸಂಭವಿಸಿದ ತಕ್ಷಣ ಕಾರಿನಲ್ಲಿದ್ದ ಚಾಲಕ, ಮಹಿಳೆ ಮತ್ತು ಮಗು ಹೊರಬರಲಾಗದೆ ವಾಹನದೊಳಗಡೆಯೇ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ವಿಟ್ಲ ಪೊಲೀಸ್ ಠಾಣೆಯ ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಕರುಣಾಕರ ಅವರು ಕ್ಷಣ ಮಾತ್ರವೂ ತಡಮಾಡದೆ ರಕ್ಷಣೆಗೆ ಇಳಿದರು. ಭಯದಿಂದ ಅಳುತ್ತಿದ್ದ ಮಗುವನ್ನು ಎಸ್‌ಐ ರಾಮಕೃಷ್ಣ ಅವರು ತಕ್ಷಣ ತಮ್ಮ ಕೈಗಳಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.
ಸಿಸಿಟಿವಿಯಲ್ಲಿ ಸೆರೆಯಾಯ್ತು ಮಾನವೀಯತೆ:
ಪೋಲಿಸ್ ಅಧಿಕಾರಿಯ ಈ ಕ್ಷಿಪ್ರ ಹಾಗೂ ಮಾನವೀಯ ಕಾರ್ಯಾಚರಣೆ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ:
ಖಾಕಿ ಸಮವಸ್ತ್ರದ ಹಿಂದಿರುವ ಮಾನವೀಯತೆಯನ್ನು ಎತ್ತಿಹಿಡಿದ ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ಕರ್ತವ್ಯದ ಜೊತೆಗೆ ಮಾನವೀಯತೆಗೆ ಮೊದಲ ಆದ್ಯತೆ ನೀಡಿದ ನಿಜವಾದ ರಕ್ಷಕ", "ಇಲಾಖೆಗೆ ಹೆಮ್ಮೆ ತಂದ ಅಧಿಕಾರಿ" ಎಂದು ನೆಟ್ಟಿಗರು ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಕರುಣಾಕರ ಅವರ ಸಮಯೋಚಿತ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
