ದಕ್ಷಿಣ ಕನ್ನಡ

ಬೆಳ್ತಂಗಡಿ : ದಿಡುಪೆ ಜಲಪಾತದ ಬಳಿ ಜಗಳ: ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ, ಅರ್ಧ ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾದ ಯುವಕರ ಗುಂಪು!

 


ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದಿಡುಪೆ ಜಲಪಾತದ ಬಳಿ ಪ್ರವೇಶ ಶುಲ್ಕದ ರಶೀದಿ ವಿಚಾರವಾಗಿ ವಾಗ್ವಾದ ನಡೆದು, ಅರಣ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಅಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

​ಜುಲೈ 19ರಂದು ಈ ಘಟನೆ ಸಂಭವಿಸಿದ್ದು, ಜಲಪಾತದ ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಗುತ್ತಿಗೆ ವಾಚರ್ ಗೋಪಾಲ (42) ಎಂಬವರ ಮೇಲೆ ಯುವಕರ ಗುಂಪೊಂದು ದಾಳಿ ನಡೆಸಿದೆ.

ಘಟನೆಯ ವಿವರ:

​ಅರಣ್ಯ ಇಲಾಖೆಯ ನಿಯಮದಂತೆ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ಸಂಗ್ರಹಿಸುವ ಪ್ರವೇಶ ಶುಲ್ಕದ ಉಸ್ತುವಾರಿಯನ್ನು ಗೋಪಾಲ ವಹಿಸಿಕೊಂಡಿದ್ದರು. ಜುಲೈ 19ರ ಮಧ್ಯಾಹ್ನ ಸುಮಾರು 15 ಯುವಕರ ತಂಡವೊಂದು ಜಲಪಾತಕ್ಕೆ ಭೇಟಿ ನೀಡಿತ್ತು. ಇಲಾಖೆಯ ನಿಯಮದಂತೆ ತಲಾ ₹200ರಂತೆ ಒಟ್ಟು ₹3,000 ನಗದು ಸ್ವೀಕರಿಸಿದ ಗೋಪಾಲ ಅವರು, ಪ್ರವಾಸಿಗರಿಗೆ ಕೈಬರಹದ ರಶೀದಿ ನೀಡಿದ್ದರು. ಅಲ್ಲದೆ, ಗುಂಪಿನಲ್ಲಿದ್ದ ಪ್ರತಾಪ್ ಭಟ್ಕಳ್ ಎಂಬಾತನ ಗುರುತಿನ ಚೀಟಿ ಪಡೆದು ನೋಂದಣಿ ಪುಸ್ತಕದಲ್ಲಿ ನಮೂದಿಸಿ ಒಳಗಡೆ ಬಿಡಲಾಗಿತ್ತು.

ಡಿಜಿಟಲ್ ರಶೀದಿಗಾಗಿ ವಾಗ್ವಾದ:

​ಜಲಪಾತ ವೀಕ್ಷಿಸಿ ಹಿಂತಿರುಗಿದ ಯುವಕರ ತಂಡ, ತಮಗೆ ಡಿಜಿಟಲ್ ರಶೀದಿಯನ್ನೇ ನೀಡಬೇಕೆಂದು ಪಟ್ಟು ಹಿಡಿಯಿತು. ಈ ವೇಳೆ ತಾಂತ್ರಿಕ ಕಾರಣಗಳಿಂದಾಗಿ ಡಿಜಿಟಲ್ ರಶೀದಿ ನೀಡುವ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗೋಪಾಲ ಅವರು ಪರಿಸ್ಥಿತಿಯನ್ನು ವಿವರಿಸಿದರೂ, ಯುವಕರು ಅನಗತ್ಯ ತಕರಾರು ತೆಗೆದು ವಾಗ್ವಾದಕ್ಕಿಳಿದರೆನ್ನಲಾಗಿದೆ.

ಹಲ್ಲೆ ಮತ್ತು ಹಣ ದೋಚಿ ಪರಾರಿ:

​ಮಾತು ಬೆಳೆದು ಕಡೆಗೆ ಪ್ರತಾಪ್ ಭಟ್ಕಳ್ ಎಂಬಾತ ಗೋಪಾಲ ಅವರನ್ನು ತಡೆದು ನಿಲ್ಲಿಸಿ, ನೀಡಿದ್ದ ಹಣವನ್ನು ತಕ್ಷಣವೇ ಹಿಂತಿರುಗಿಸುವಂತೆ ಬೆದರಿಕೆ ಒಡ್ಡಿದ್ದಾನೆ. ಬಳಿಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕರು, ಗೋಪಾಲ ಅವರ ಬಳಿಯಿದ್ದ ₹50,500 ನಗದು ಒಳಗೊಂಡಿದ್ದ ಬ್ಯಾಗ್ ಅನ್ನು ಬಲವಂತವಾಗಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

​ಈ ಕುರಿತು ಸಂತ್ರಸ್ತ ಗೋಪಾಲ ಅವರು ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಭಟ್ಕಳ್ ಹಾಗೂ ಆತನೊಂದಿಗಿದ್ದ ಇತರ ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



image