ದಕ್ಷಿಣ ಕನ್ನಡ

​ಸುರತ್ಕಲ್: ಯುವಕನ ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ರೋಚಕ ತಿರುವು; ತಮ್ಮನನ್ನೇ ಕೊಲೆಗೈದ ಅಣ್ಣ!

 


ಮಂಗಳೂರು:ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಯುವಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಯುವಕನ ಮರಣವು ಆಕಸ್ಮಿಕವಲ್ಲ, ಬದಲಿಗೆ ಸ್ವಂತ ಅಣ್ಣನೇ ಮಾಡಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ರಾತ್ರಿ ಮಲಗಿದ್ದಾಗ ನಡೆಯಿತು ಕೃತ್ಯ:

ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದವರಾದ ಮಲ್ಲಿಕಾರ್ಜುನ (20) ಕೊಲೆಯಾದ ದುರ್ದೈವಿ. ಇವರು ಪ್ರಸ್ತುತ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಮಠದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭಾನುವಾರ ತಡರಾತ್ರಿ ಮಲ್ಲಿಕಾರ್ಜುನ ಗಾಢ ನಿದ್ರೆಯಲ್ಲಿದ್ದಾಗ, ಆತನ ಅಣ್ಣ ಸೋಮನಾಥ (21) ತಲೆಗೆ ಭಾರವಾದ ಕಲ್ಲು ಎತ್ತಿಹಾಕಿ ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ವಶದಲ್ಲಿ ಆರೋಪಿಗಳು:

ಕೊಲೆ ನಡೆಸಿದ ಬಳಿಕ ಮೃತದೇಹವನ್ನು ಬಾವಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೋಮನಾಥ್ ಹಾಗೂ ಆತನಿಗೆ ಕೃತ್ಯದಲ್ಲಿ ಸಹಕರಿಸಿದ ಶಂಕೆಯ ಮೇರೆಗೆ ನೆರೆಮನೆಯ ಮತ್ತೊಬ್ಬ ಯುವಕನನ್ನು ಸುರತ್ಕಲ್ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

​ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.



image