ಬಂಟ್ವಾಳ: ತಾಲೂಕಿನ ಫರಂಗಿಪೇಟೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸುಜೀರು ಬದಿಗುಡ್ಡೆ ನಿವಾಸಿ ಮುಹಮ್ಮದ್ ಶಾಖಿರ್ ಎಂದು ಗುರುತಿಸಲಾಗಿದೆ.
ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಪ್ರಕ್ರಿಯೆಯಂತೆ ವಿಚಾರಣೆ ನಡೆಸುತ್ತಿದ್ದಾರೆ.
ಮುಂದುವರಿದ ತನಿಖೆ:
ಈ ಕೃತ್ಯದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ? ಕಳುವಾದ ನಗದು ಹಾಗೂ ವಸ್ತುಗಳು ಎಲ್ಲೆಲ್ಲಿವೆ? ಮತ್ತು ಕಳ್ಳತನಕ್ಕೆ ಬಳಸಲಾದ ವಾಹನ ಹಾಗೂ ಇತರ ಸಾಕ್ಷ್ಯಾಧಾರಗಳ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ತನಿಖೆ ಇನ್ನು ಪ್ರಗತಿಯಲ್ಲಿರುವುದರಿಂದ, ಹೆಚ್ಚಿನ ಅಧಿಕೃತ ವಿವರಗಳನ್ನು ಪೊಲೀಸ್ ಇಲಾಖೆ ಇನ್ನು ಬಹಿರಂಗಪಡಿಸಿಲ್ಲ. ವಿಚಾರಣೆ ಪೂರ್ಣಗೊಂಡ ನಂತರ ಪೊಲೀಸರು ಹೆಚ್ಚಿನ ಮಾಹಿತಿಯನ್ನು ನೀಡುವ ಸಾಧ್ಯತೆಯಿದೆ.
