ಮಂಗಳೂರು:"ಸುದ್ದಿಗಳನ್ನು ವೈಭವೀಕರಿಸುವುದನ್ನು ಬಿಟ್ಟು, ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಾಸ್ತವ ವರದಿಯನ್ನು ನೀಡಿದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ," ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಪಾದಿಸಿದರು.
ನಗರದ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಿದ್ದ 'ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾರದರ್ಶಕ ವರದಿಯೇ ಸಮಾಜಕ್ಕೆ ಅಗತ್ಯ
ಕಾರ್ಯಕ್ರಮದಲ್ಲಿ ಮಾತನಾಡಿದ ಆಯುಕ್ತರು, "ಹಿಂದೆ ಒಂದೇ ಘಟನೆಯನ್ನು ಹಲವು ರೀತಿಯಲ್ಲಿ ಬಣ್ಣಿಸಿ ವೈಭವೀಕರಿಸಲಾಗುತ್ತಿತ್ತು. ಆದರೆ ಇಂದು 'ಫ್ಯಾಕ್ಟ್ ಚೆಕ್' ಮಾದರಿಯಲ್ಲಿ ಸುದ್ದಿಗಳು ಹೊರಬರುತ್ತಿರುವುದು ಸಂತಸದ ವಿಷಯ. ಸಾಮಾಜಿಕ ಸಾಮರಸ್ಯ ಮತ್ತು ಶಾಂತಿ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದು. ಸಮಾಜದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಜವಾಬ್ದಾರಿ ಪತ್ರಿಕೋದ್ಯಮದ ಮೇಲಿದೆ," ಎಂದು ತಿಳಿಸಿದರು.
ಕರಾವಳಿಯ ಯುವಕರು ಜನಸೇವೆಗೆ ಬರಲಿ: ಡಾ. ವಿ. ಕರಿಕಾಲನ್
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಾಲನ್ ಮಾತನಾಡಿ, "ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪತ್ರಕರ್ತರು ಸಮಾಜವನ್ನು ಜಾಗೃತಗೊಳಿಸುತ್ತಿದ್ದಾರೆ. ಕರಾವಳಿ ಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಪಡೆದಿದ್ದರೂ, ಸಾರ್ವಜನಿಕ ಸೇವೆ ಮತ್ತು ಆಡಳಿತ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆ ಇದೆ. ಯುವ ಸಮುದಾಯ ಉದ್ಯಮದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಜನಸೇವೆಗೆ ಹೆಚ್ಚಿನ ಒತ್ತು ನೀಡಬೇಕು," ಎಂದು ಕರೆ ನೀಡಿದರು.
ಸುಳ್ಳು ಸುದ್ದಿಗಳ ತಡೆಗಟ್ಟುವಿಕೆಯೇ ಸವಾಲು: ಹರಿಪ್ರಸಾದ್ ಅಡ್ಪಂಗಾಯ
ಪತ್ರಿಕಾ ದಿನದ ವಿಶೇಷ ಉಪನ್ಯಾಸ ನೀಡಿದ ನ್ಯೂಸ್-18ನ ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ಅವರು, ಡಿಜಿಟಲ್ ಯುಗದ ಸವಾಲುಗಳ ಬಗ್ಗೆ ಎಚ್ಚರಿಸಿದರು. "ಸೋಷಿಯಲ್ ಮೀಡಿಯಾದಿಂದ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಧರ್ಮ, ಜಾತಿಗಳನ್ನು ವೈಭವೀಕರಿಸದೆ, ವಸ್ತುನಿಷ್ಠರಾಗಿ ಕಾರ್ಯನಿರ್ವಹಿಸಬೇಕು. ಪತ್ರಿಕೋಧ್ಯಮ ಸಮಾಜದ ಕನ್ನಡಿಯಾಗಿದ್ದು, ನಾವು ಅದನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. 1843ರಲ್ಲಿ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು ಆರಂಭಿಸಿದ 'ಮಂಗಳೂರು ಸಮಾಚಾರ'ದ ಆಶಯವನ್ನು ಮೈಗೂಡಿಸಿಕೊಂಡು ಸತ್ಯದ ಹಾದಿಯಲ್ಲಿ ನಡೆಯುವುದು ಇಂದಿನ ತುರ್ತು ಅಗತ್ಯ," ಎಂದು ಅಭಿಪ್ರಾಯಪಟ್ಟರು.
ಗೌರವಾರ್ಪಣೆ ಮತ್ತು ಪುರಸ್ಕಾರ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ಇದೇ ವೇಳೆ ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪತ್ರಕರ್ತರ ಸಾಧಕ ಮಕ್ಕಳನ್ನು ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್‌ನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ವಿಜಯ ಕೋಟ್ಯಾನ್ ಪಡು ಅವರು ಮಕ್ಕಳ ಪ್ರತಿಭಾ ಪುರಸ್ಕಾರದ ವಿವರ ನೀಡಿದರು, ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

