ಬೆಂಗಳೂರು:ಧಾರವಾಡದ ಬಿಜೆಪಿ ನಾಯಕ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಉಚ್ಚ ನ್ಯಾಯಾಲಯದಿಂದ ದೊಡ್ಡ ಮಟ್ಟದ ಸಮಾಧಾನಕರ ಸುದ್ದಿ ಸಿಕ್ಕಿದೆ. ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ಹೈಕೋರ್ಟ್, ಅವರಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜು ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಶುಕ್ರವಾರ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಶಾಸಕ ಸ್ಥಾನ ಮರುಸ್ಥಾಪನೆಗೆ ಹಾದಿ ಸುಗಮ:
ಹೈಕೋರ್ಟ್‌ನ ಈ ನಿರ್ಣಾಯಕ ಆದೇಶದಿಂದಾಗಿ ವಿನಯ್ ಕುಲಕರ್ಣಿ ಅವರ ಶಾಸಕತ್ವ ಮರುಸ್ಥಾಪನೆಗೆ ಇದ್ದ ಹಾದಿ ಸುಗಮವಾದಂತಾಗಿದೆ. ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಪೀಠವು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ:
- ₹5 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಶೂರಿಟಿ ಒದಗಿಸಬೇಕು.
- ತನಿಖೆಗೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಸಂಪೂರ್ಣ ಸಹಕಾರ ನೀಡಬೇಕು.
- ನ್ಯಾಯಾಲಯದ ಪೂರ್ಪಾನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ದೇಶ ತೊರೆಯುವಂತಿಲ್ಲ.
ಪ್ರಕರಣದ ಹಿನ್ನೆಲೆ:
2016ರಲ್ಲಿ ನಡೆದಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, 2026ರ ಏಪ್ರಿಲ್ 17ರಂದು ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.
ಈ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಮತ್ತು ಇತರ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ (Appeal) ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಇದೀಗ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದೆ.

