ದಕ್ಷಿಣ ಕನ್ನಡ

ಬೆಳ್ತಂಗಡಿ: ಗುರುವಾಯನಕೆರೆ-ವೇಣೂರು ಮಾರ್ಗದಲ್ಲಿ ಹೊಂಡ ಮುಚ್ಚುವ ಕಾಮಗಾರಿ ಆರಂಭ; ಶಾಸಕ ಹರೀಶ್ ಪೂಂಜ ಸ್ಪಂದನೆ

 


ಬೆಳ್ತಂಗಡಿ: ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಗುರುವಾಯನಕೆರೆ ಹಾಗೂ ವೇಣೂರು ನಡುವಿನ ಪಡಂಗಡಿ ಭಾಗದಲ್ಲಿ ಸಂಪೂರ್ಣ ಹಾನಿಗೊಳಗಾಗಿದ್ದ ರಸ್ತೆಯ ತುರ್ತು ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆತಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ತುಂಬಾ ಬೃಹತ್‌ ಹೊಂಡಗಳು ಬಿದ್ದು, ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿತ್ತು.

​ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕ ಹರೀಶ್ ಪೂಂಜ ಅವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಹಾಗೂ ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ದುರಸ್ತಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ತಾತ್ಕಾಲಿಕ ದುರಸ್ತಿ ಕಾರ್ಯ:

​ಶಾಸಕರ ನಿರ್ದೇಶನದಂತೆ ಪಡಂಗಡಿ ವ್ಯಾಪ್ತಿಯ ಅಪಾಯಕಾರಿ ಹಂತ ತಲುಪಿದ್ದ ರಸ್ತೆಗೆ 'ವೆಟ್‌ ಮಿಕ್ಸ್' (Wet Mix) ಹಾಕಿ ಸದ್ಯಕ್ಕೆ ವಾಹನ ಸಂಚಾರಕ್ಕೆ ಸುಗಮ ಅನುಕೂಲ ಮಾಡಿಕೊಡಲಾಗಿದೆ. ಇದರಿಂದಾಗಿ ತಾತ್ಕಾಲಿಕವಾಗಿ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ಶಾಶ್ವತ ಪರಿಹಾರದ ಭರವಸೆ:

"ಪ್ರಸ್ತುತ ಸಾರ್ವಜನಿಕರ ತೊಂದರೆ ತಪ್ಪಿಸಲು ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಲಾಗಿದೆ. ಶೀಘ್ರದಲ್ಲೇ ಈ ಮಾರ್ಗದ ಸಂಪೂರ್ಣ ಶಾಶ್ವತ ಪುನರ್ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು" ಎಂದು ಶಾಸಕರ ಕಚೇರಿಯ ಮೂಲಗಳು ತಿಳಿಸಿವೆ.



image