ರಾಜ್ಯ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಪಕ್ಕಾ? ಲೋಕಭವನದಲ್ಲಿ ಜೋರಾದ ಸಿದ್ಧತೆ, ಬಿಗಿ ಪೊಲೀಸ್ ಬಂದೋಬಸ್ತ್!

 


ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಧಾನಿಯಲ್ಲಿ ಪ್ರಮುಖ ಬೆಳವಣಿಗೆಗಳು ಕಂಡುಬರುತ್ತಿವೆ. ಸಂಪುಟ ವಿಸ್ತರಣೆಯ ಅಧಿಕೃತ ದಿನಾಂಕ ಇನ್ನೂ ಹೊರಬಿದ್ದಿಲ್ಲವಾದರೂ, ರಾಜಭವನದ (ಲೋಕಭವನ) ಆವರಣದಲ್ಲಿ ನಡೆಯುತ್ತಿರುವ ತರಾತುರಿಯ ಸಿದ್ಧತೆಗಳು ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ಸಚಿವರಿಗೆ ಪ್ರಮಾಣ ವಚನ ಬೋಧಿಸಲು ಮುಂದಾಗಿದೆ ಎಂಬ ಸುಳಿವು ನೀಡುತ್ತಿವೆ.

ಲೋಕಭವನದಲ್ಲಿ ಹೈ ಅಲರ್ಟ್:

ಲೋಕಭವನದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಪ್ರಮುಖ ಕಾರ್ಯಕ್ರಮಕ್ಕೆ ಅಗತ್ಯವಿರುವ ಶಾಮಿಯಾನ, ಪೆಂಡಾಲ್ ಹಾಗೂ ಗಣ್ಯರಿಗಾಗಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ತಯಾರಿ ಭರದಿಂದ ಸಾಗಿದೆ.

ದೆಹಲಿಯಲ್ಲಿ ಅಂತಿಮ ಕಸರತ್ತು:

ಇನ್ನೊಂದೆಡೆ, ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಮ್ಮುಖದಲ್ಲಿ ಸಚಿವರ ಅಂತಿಮ ಪಟ್ಟಿ ಸಿದ್ಧಪಡಿಸುವ ಕಾರ್ಯ ತೀವ್ರಗೊಂಡಿದೆ. ತಡರಾತ್ರಿ ಹೈಕಮಾಂಡ್ ನಾಯಕರೊಂದಿಗೆ ನಡೆಯಲಿರುವ ಸಭೆಯಲ್ಲಿ ಪಟ್ಟಿ ಆಖೈರುಗೊಂಡರೆ, ನಾಳೆಯೇ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ನಾಳೆ ಸಾಧ್ಯವಾಗದಿದ್ದಲ್ಲಿ, ಮುಂಬರುವ ಎರಡರಿಂದ ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.

​ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ ಮಾತ್ರ ಬಾಕಿ ಇದ್ದು, ಲೋಕಭವನದಲ್ಲಿ ಸಕಲ ಪೂರ್ವಸಿದ್ಧತೆಗಳು ಪೂರ್ಣಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಕಾವು ಹೆಚ್ಚಿಸಿದೆ.



image