ಚಿಕ್ಕಮಗಳೂರು:ಕೂಲಿ ಹಣ ಹಂಚಿಕೆ ವಿಚಾರವಾಗಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ಬಂದೂಕು ಮಿಸ್‌ಫೈರ್ ಆದ ಪರಿಣಾಮ ಅಪ್ರಾಪ್ತ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಲಾಟೆಗೆ ಕಾರಣವೇನು?
ಬಾಳೆಹಳ್ಳಿ ಗ್ರಾಮದ ಜಗದೀಶ್ ಗೌಡ ಎಂಬುವರ ತೋಟದಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನಗೂಲಿಯಾಗಿ 400 ರೂಪಾಯಿ ನೀಡುವಂತೆ ಕಾರ್ಮಿಕರು ಪಟ್ಟು ಹಿಡಿದಿದ್ದರು. ಆದರೆ ಮಾಲೀಕರ ಕಡೆಯವರು ಸದ್ಯಕ್ಕೆ 350 ರೂಪಾಯಿ ನೀಡಿ, ಉಳಿದ 50 ರೂಪಾಯಿಯನ್ನು ಆಮೇಲೆ ಕೊಡುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಇದಕ್ಕೆ ಒಪ್ಪದ ಕಾರ್ಮಿಕರು ಪೂರ್ಣ ಕೂಲಿ ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ಹೇಳಿ ಸ್ಥಳದಿಂದ ಹೊರಡಲು ಯತ್ನಿಸಿದಾಗ ಮಾತಿನ ಚಕಮಕಿ ಆರಂಭವಾಗಿದೆ.
ಬೆದರಿಸಲು ಹೋದಾಗ ನಡೆದ ಅನಾಹುತ
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದಾಗ ಕಾರ್ಮಿಕರನ್ನು ಹೆದರಿಸುವ ಉದ್ದೇಶದಿಂದ ಜಗದೀಶ್ ಗೌಡ ಅವರ ಸಹೋದರ ಪ್ರಭಾಕರ್ ಅವರು ಗಾಳಿಯಲ್ಲಿ ಬಂದೂಕು ಹಾರಿಸಲು ಯತ್ನಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಮಿಸ್‌ಫೈರ್ ಸಂಭವಿಸಿ, ಸ್ಥಳದಲ್ಲಿದ್ದ ಅಪ್ರಾಪ್ತ ಬಾಲಕನ ತಲೆಗೆ ಸಣ್ಣ ಮದ್ದು (ಗುಂಡು) ತಾಗಿದೆ ಎಂದು ಆರೋಪಿಸಲಾಗಿದೆ.
ಮಂಗಳೂರು ಆಸ್ಪತ್ರೆಗೆ ರವಾನೆ
ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕನನ್ನು ತಕ್ಷಣವೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸ್ ತನಿಖೆ ಪ್ರಗತಿಯಲ್ಲಿ
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮೂಡಿಗೆರೆ ಠಾಣಾಧಿಕಾರಿಗಳು, "ಕೂಲಿ ವಿಚಾರದ ಗಲಾಟೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಮದ್ದು ಮಗುವಿನ ತಲೆಗೆ ತಗಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದ್ದು, ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ" ಎಂದು ತಿಳಿಸಿದ್ದಾರೆ.
