ಚಿಕ್ಕಮಗಳೂರು: ಕಾಡುಹಂದಿ ಶಿಕಾರಿಗಾಗಿ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಾಗಿ ವ್ಯಕ್ತಿಯೊಬ್ಬರು ದುರಂತವಾಗಿ ಕೊನೆಯುಸಿರೆಳೆದಿದ್ದು, ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನಿಸಿ ಶವ ಹೂತುಹಾಕಿದ್ದ ಮೂವರು ಆರೋಪಿಗಳನ್ನು ಯಗಟಿ ಠಾಣೆ ಪೊಲೀಸರು ಕಟಾಕಟೆಗೆ ತಳ್ಳಿದ್ದಾರೆ.
ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ಕರಿಯಪ್ಪ (55) ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ನಡೆದಿದ್ದೇನು?
ದೊಣ್ಣೆಕೋರನಹಳ್ಳಿ ವ್ಯಾಪ್ತಿಯಲ್ಲಿ ಆರೋಪಿಗಳು ಕಾಡುಹಂದಿ ಬೇಟೆಯಾಡುವ ಉದ್ದೇಶದಿಂದ ಅಕ್ರಮವಾಗಿ ವಿದ್ಯುತ್ ಮಾರ್ಗದಿಂದ ತಂತಿ ಎಳೆದಿದ್ದರು. ಜಮೀನಿನತ್ತ ತೆರಳಿದ್ದ ಕರಿಯಪ್ಪ ಅವರು ಆಕಸ್ಮಿಕವಾಗಿ ಈ ಜೀವಂತ ವಿದ್ಯುತ್ ತಂತಿಯನ್ನು ತುಳಿದಿದ್ದು, ತೀವ್ರ ಆಘಾತದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ದುರಂತ ಸಂಭವಿಸುತ್ತಿದ್ದಂತೆ ಭಯಭೀತರಾದ ಆರೋಪಿಗಳು, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೊಸ ಸಂಚು ರೂಪಿಸಿದ್ದರು. ವಿಷಯ ಯಾರಿಗೂ ತಿಳಿಯದಂತೆ ಕರಿಯಪ್ಪ ಅವರ ಮೃತದೇಹವನ್ನು ಗುಟ್ಟಾಗಿ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು.
ಸಿಸಿಟಿವಿಯಲ್ಲಿ ಬಯಲಾಯ್ತು ಅಸಲಿ ಕೃತ್ಯ!
ಮನೆಗೆ ಹಿಂತಿರುಗದಿರುವುದನ್ನು ಕಂಡು ಆತಂಕಗೊಂಡ ಕರಿಯಪ್ಪ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸುಳಿವು ಸಿಗದಿದ್ದಾಗ ಯಗಟಿ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿ ಕಾಣೆಯಾಗಿರುವ (ಮಿಸ್ಸಿಂಗ್) ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯಗಟಿ ಪೊಲೀಸರು ತನಿಖೆ ಚುರುಕುಗೊಳಿಸಿ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದಾಗ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಸತ್ಯ ಹೊರಬಿದ್ದಿದೆ.
ಘಟನೆಯ ಸುಳಿವು ಸಿಗುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಯಗಟಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸದ್ಯ ಮೂವರನ್ನೂ ಬಂಧಿಸಿರುವ ಪೊಲೀಸರು, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.
