ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ, ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವುದಕ್ಕೆ ರಾಜ್ಯ ಆರೋಗ್ಯ ಇಲಾಖೆ ಬ್ರೇಕ್ ಹಾಕಿದೆ. ನಗರದಲ್ಲಿ ಹಕ್ಕಿಗಳಿಗೆ ಅಸಂಖ್ಯಾತವಾಗಿ ಆಹಾರ ನೀಡುವುದರಿಂದ ಎದುರಾಗುತ್ತಿರುವ ಸಾಂಕ್ರಾಮಿಕ ರೋಗಗಳ ಭೀತಿ ಹಾಗೂ ನೈರ್ಮಲ್ಯದ ಕೊರತೆಯನ್ನು ನೀಗಿಸಲು ನೂತನ ಮಾರ್ಗಸೂಚಿಯನ್ನು (Guidelines) ಬಿಡುಗಡೆ ಮಾಡಲಾಗಿದೆ.
ವಿಶೇಷವಾಗಿ ಸಾರ್ವಜನಿಕ ಸಾರಿಗೆ, ಜನನಿಬಿಡ ಪ್ರದೇಶಗಳು ಹಾಗೂ ಆರೋಗ್ಯಕ್ಕೆ ಧಕ್ಕೆಯಾಗುವಂತಹ ಸೂಕ್ಷ್ಮ ಜಾಗಗಳಲ್ಲಿ ಪಾರಿವಾಳಗಳಿಗೆ ಧಾನ್ಯ/ಆಹಾರ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು:
- ನಿಗದಿತ ಸಮಯ ಮತ್ತು ಸ್ಥಳ ಮಾತ್ರ: ರಸ್ತೆಗಳು, ಫುಟ್‌ಪಾತ್‌ಗಳು, ಸಾರ್ವಜನಿಕ ಉದ್ಯಾನವನಗಳು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಯಥೇಚ್ಛವಾಗಿ ಆಹಾರ ಹಾಕುವಂತಿಲ್ಲ. ಸ್ಥಳೀಯ ಆಡಳಿತ/ಸಂಸ್ಥೆಗಳು ಗುರುತಿಸುವ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ, ಅದೂ ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಕಾಲಾವಕಾಶ ಕಲ್ಪಿಸಲಾಗಿದೆ.
- ಎನ್‌ಜಿಒಗಳಿಗೆ ನಿರ್ವಹಣೆಯ ಹೊಣೆ: ಪಾರಿವಾಳಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಮಾನ್ಯತೆ ಪಡೆದ ಸ್ವಯಂಸೇವಾ ಸಂಸ್ಥೆಗಳು (NGO) ಅಥವಾ ದತ್ತಿ ಟ್ರಸ್ಟ್‌ಗಳು ನಿರ್ವಹಿಸಬೇಕು. ಆಹಾರ ನೀಡುವ ಸ್ಥಳದ ನೈರ್ಮಲ್ಯ, ದಿನನಿತ್ಯದ ಸ್ವಚ್ಛತೆ ಮತ್ತು ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಹರಿಸುವ ಜವಾಬ್ದಾರಿ ಈ ಸಂಸ್ಥೆಗಳದ್ದೇ ಆಗಿರುತ್ತದೆ.
- ಅಪಾರ್ಟ್‌ಮೆಂಟ್ ಮತ್ತು ನಿವಾಸಿಗಳಿಗೆ ಎಚ್ಚರಿಕೆ: ಮನೆಗಳ ಬಾಲ್ಕನಿ, ಟೆರೇಸ್ ಹಾಗೂ ಅಪಾರ್ಟ್‌ಮೆಂಟ್ ಆವರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳಗಳು ಸೇರುವಂತೆ ಆಹಾರ ಹಾಕಬಾರದು ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ (RWA) ಸ್ಪಷ್ಟ ನಿರ್ದೇಶನ ನೀಡಲಾಗಿದೆ.
- ವಿಮಾನ ನಿಲ್ದಾಣಗಳ ಬಳಿ ಸಂಪೂರ್ಣ ನಿಷೇಧ: ವಿಮಾನಯಾನ ಭದ್ರತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರಿವಾಳಗಳ ಆಹಾರ ಕೇಂದ್ರಗಳನ್ನು ಸ್ಥಾಪಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸಲು ನಗರಾದ್ಯಂತ ಮಾಹಿತಿ ಫಲಕಗಳು, ಜಾಗೃತಿ ಬ್ಯಾನರ್‌ಗಳು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಅಭಿಯಾನ ನಡೆಸಲು ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
