ರಾಜ್ಯ

ಬೆಂಗಳೂರು : ಉದ್ಯೋಗವೂ ಇಲ್ಲ, ಮದುವೆಗೆ ಹೆಣ್ಣೂ ಸಿಗ್ತಿಲ್ಲ: ಕಾಂಗ್ರೆಸ್ ಸರ್ಕಾರಕ್ಕೆ ‘ಕನ್ಯಾ ಭಾಗ್ಯ’ ನೀಡಿ ಎಂದ ಶಿಕ್ಷಕ ಅಭ್ಯರ್ಥಿಗಳು!

 


ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆಯಂತಹ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ವಿಚಿತ್ರ ಹಾಗೂ ಕಣ್ಣೀರಿನ ಮನವಿಯೊಂದು ಬಂದಿದೆ. "ನಮಗೆ ಉದ್ಯೋಗವೂ ಸಿಗುತ್ತಿಲ್ಲ, ಮದುವೆಗೆ ಹೆಣ್ಣೂ ಸಿಗುತ್ತಿಲ್ಲ... ದಯವಿಟ್ಟು ನಮಗೆ 'ಕನ್ಯಾ ಭಾಗ್ಯ' ಯೋಜನೆಯನ್ನಾದರೂ ಜಾರಿಗೆ ತನ್ನಿ!" ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಸರ್ಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

​ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಹಗಲು-ರಾತ್ರಿ ಕಷ್ಟಪಟ್ಟು ಓದಿ ಪದವಿ ಪಡೆದರೂ ಯುವಜನತೆಗೆ ಸೂಕ್ತ ಉದ್ಯೋಗ ಸಿಗದಿರುವುದು ದೊಡ್ಡ ಸವಾಲಾಗಿದೆ. ನಗರಗಳಲ್ಲಿ ಕೆಲಸ ಸಿಗದೆ, ನಿರಾಶೆಯಿಂದ ಸ್ವಗ್ರಾಮಕ್ಕೆ ಮರಳಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರೂ, 'ಕೆಲಸವಿಲ್ಲ' ಎಂಬ ಕಾರಣಕ್ಕೆ ಯುವಕರಿಗೆ ಹೆಣ್ಣು ಕೊಡಲು ಪೋಷಕರು ಮುಂದಾಗುತ್ತಿಲ್ಲ. ವಯಸ್ಸು ಮೀರುತ್ತಿದ್ದರೂ ಕೆಲಸವೂ ಇಲ್ಲದೆ, ಮದುವೆಯೂ ಆಗದೆ ಸಂಕಷ್ಟಕ್ಕೆ ಸಿಲುಕಿರುವ ಯುವಕರ ಸ್ಥಿತಿ ಈಗ 'ತ್ರಿಶಂಕು'ವಿನಂತಾಗಿದೆ.

​32 ಸಾವಿರ ಹುದ್ದೆ ಖಾಲಿ: ಕೇವಲ 800 ಹುದ್ದೆಗೆ ನೇಮಕಾತಿ!

​ಡಿ.ಎಡ್ (D.Ed - Diploma in Education) ಮುಗಿಸಿ ವರ್ಷಗಳಿಂದ ಸೂಕ್ತ ನೇಮಕಾತಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳ ಆಕ್ರೋಶ ಈಗ ಮುಗಿಲು ಮುಟ್ಟಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 32,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದರೆ, ಶಿಕ್ಷಣ ಇಲಾಖೆಯು ಕೇವಲ 800 ಹುದ್ದೆಗಳ ನೇಮಕಾತಿಗೆ ಮಾತ್ರ ಸೂಚನೆ ನೀಡಿರುವುದು ಅಭ್ಯರ್ಥಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

​ಅದರಲ್ಲೂ ವಿಶೇಷವಾಗಿ 'ಕಲ್ಯಾಣ ಕರ್ನಾಟಕ' ಭಾಗಕ್ಕೆ ಸೀಮಿತವಾಗಿ ಕೇವಲ 800 ಹುದ್ದೆ ಕರೆದಿರುವುದು ಉಳಿದ ಭಾಗದ ಅಭ್ಯರ್ಥಿಗಳನ್ನು ಕತ್ತಲಲ್ಲಿಟ್ಟಂತಾಗಿದೆ.

​ಸರ್ಕಾರದ ವಿರುದ್ಧ ಯುವಕರ ಆಕ್ರೋಶ

​"ನಾವು ಇನ್ನೆಷ್ಟು ವರ್ಷ ನೇಮಕಾತಿಗಾಗಿ ಕಾಯಬೇಕು? ಸರಿಯಾದ ಸಮಯಕ್ಕೆ ಸರ್ಕಾರಿ ಕೆಲಸ ಸಿಗದಿದ್ದರೆ ನಮಗೆ ಹೆಣ್ಣು ಕೊಡುವವರ ಯಾರು? ವಯಸ್ಸು ಜಾರುತ್ತಾ ಸಾಗುತ್ತಿದೆ. ಸರ್ಕಾರವೇ ನಮಗೆ ಉದ್ಯೋಗ ನೀಡಲಿ ಅಥವಾ ನಮಗಾಗಿ 'ಕನ್ಯಾ ಭಾಗ್ಯ' ಯೋಜನೆಯನ್ನಾದರೂ ಜಾರಿಗೆ ತರಲಿ" ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಭ್ಯರ್ಥಿಗಳು ತಮ್ಮ ಅಸಹಾಯಕತೆ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

​ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಆಸರೆಯಾಗಬೇಕಿದೆ.



image