ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಓಲಾ, ಉಬರ್, ರಾಪಿಡೊ ಹಾಗೂ ನಮ್ಮ ಯಾತ್ರೆಯಂತಹ ರೈಡ್-ಹೇಲಿಂಗ್ ಆ್ಯಪ್‌ಗಳ ಮೂಲಕ ಆಟೋ ಮತ್ತು ಕ್ಯಾಬ್ ಬುಕ್ ಮಾಡಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವಂತಹ ಗಂಭೀರ ಸಮಸ್ಯೆಯೊಂದು ಬೆಳಕಿಗೆ ಬಂದಿದ್ದು, ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರ್ವಜನಿಕರಿಗೆ ಎಚ್ಚರಿಕೆಯ ಕರೆ ನೀಡಿದ್ದಾರೆ.
ಆ್ಯಪ್‌ನಲ್ಲಿ ತೋರಿಸುವ ವಾಹನದ ನೋಂದಣಿ ಸಂಖ್ಯೆ (Number Plate) ಹಾಗೂ ಚಾಲಕನ ಹೆಸರು, ನಿಮ್ಮನ್ನು ಪಿಕ್‌ಅಪ್ ಮಾಡಲು ಬರುವ ವಾಹನಕ್ಕೆ ಹೊಂದಾಣಿಕೆಯಾಗದಿದ್ದರೆ ಯಾವುದೇ ಕಾರಣಕ್ಕೂ ಅಂತಹ ವಾಹನಗಳಲ್ಲಿ ಪ್ರಯಾಣಿಸಬೇಡಿ ಎಂದು ಕಮಿಷನರ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಪೋಲಿಸ್ ಕಮಿಷನರ್ ನೀಡಿರುವ ಮಹತ್ವದ ಸೂಚನೆಗಳೇನು?
- ವಾಹನ ಹತ್ತುವ ಮುನ್ನ ನಂಬರ್ ಪರಿಶೀಲಿಸಿ: ಬುಕಿಂಗ್ ಆ್ಯಪ್‌ನಲ್ಲಿ ಕಾಣಿಸುವ ಗಾಡಿಯ ಸಂಖ್ಯೆ ಮತ್ತು ನಿಮ್ಮೆದುರು ಬಂದು ನಿಲ್ಲುವ ವಾಹನದ ನಂಬರ್ ಪ್ಲೇಟ್ ಒಂದೇ ಆಗಿದೆಯೇ ಎಂಬುದನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಿ.
- ಚಾಲಕನ ಗುರುತು ಮುಖ್ಯ: ಆ್ಯಪ್‌ನಲ್ಲಿರುವ ಚಾಲಕನ ವಿವರ ಮತ್ತು ವಾಹನ ಓಡಿಸುತ್ತಿರುವ ವ್ಯಕ್ತಿ ಒಬ್ಬರೇ ಆಗಿರಬೇಕು.
- ಪೋಲೀಸರಿಗೆ ದೂರು ನೀಡಿ: ನಂಬರ್ ಅಥವಾ ಚಾಲಕನ ವಿವರ ಮ್ಯಾಚ್ ಆಗದಿದ್ದಲ್ಲಿ, ತಕ್ಷಣವೇ ಆ ಪ್ರಯಾಣವನ್ನು ರದ್ದುಗೊಳಿಸಿ (Cancel) ಪೋಲೀಸರಿಗೆ ಮಾಹಿತಿ ನೀಡಿ. ಪ್ರಯಾಣಿಕರು ದೂರು ನೀಡಿದರೆ, ಅಂತಹ ವಾಹನಗಳು ಹಾಗೂ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
- ಆ್ಯಪ್ ಸುರಕ್ಷತೆ ಸಿಗುವುದಿಲ್ಲ: ಆ್ಯಪ್‌ನಲ್ಲಿ ನೋಂದಣಿಯಾಗದ ವಾಹನ ಏರಿದರೆ, ಆ್ಯಪ್‌ನಲ್ಲಿರುವ ಜಿಪಿಎಸ್ (GPS) ಟ್ರ್ಯಾಕಿಂಗ್ ಹಾಗೂ ತುರ್ತು ಸುರಕ್ಷತಾ 'SOS' ಫೀಚರ್‌ಗಳು ಕೆಲಸ ಮಾಡುವುದಿಲ್ಲ.
- ಕಂಪನಿಗಳು ಜವಾಬ್ದಾರಿ ತಗೆದುಕೊಳ್ಳುವುದಿಲ್ಲ: ಪ್ರಯಾಣದ ಸಮಯದಲ್ಲಿ ಏನಾದರೂ ಅಹಿತಕರ ಘಟನೆ ಅಥವಾ ಅನಾಹುತ ಸಂಭವಿಸಿದರೆ, "ಈ ವಾಹನ ನಮ್ಮ ಆ್ಯಪ್ ಮೂಲಕ ಬುಕ್ ಆಗಿಲ್ಲ" ಎಂದು ರೈಡ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಾಧ್ಯತೆ ಇರುತ್ತದೆ.
- ದಾಖಲೆಯಿಲ್ಲದ ಚಾಲಕರು: ಸೂಕ್ತ ಚಾಲನಾ ಪರವಾನಗಿ (Driving License) ಇಲ್ಲದವರು, ಪೊಲೀಸ್ ವೆರಿಫಿಕೇಶನ್ ಆಗದಿರುವವರು ಅಥವಾ ನಕಲಿ ನಂಬರ್ ಪ್ಲೇಟ್ ಬಳಸುವವರು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಸ್ಯಾದ್ಯತೆ ಹೆಚ್ಚಿರುತ್ತದೆ.
"ರೈಡ್ ಅಗ್ರಿಗೇಟರ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸುರಕ್ಷತಾ ಕ್ರಮಗಳ ಕುರಿತು ಈಗಾಗಲೇ ಸಭೆಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಇಂತಹ ವ್ಯತ್ಯಾಸಗಳು ಕಂಡುಬಂದಾಗ ಪೋಲೀಸರ ಗಮನಕ್ಕೆ ತಂದರೆ, ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಲು ಅನುಕೂಲವಾಗುತ್ತದೆ."
— ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು
ಮ್ಯಾಚ್ ಆಗದ ವಾಹನ ಹತ್ತಿದರೆ ಎದುರಾಗುವ ಅಪಾಯಗಳೇನು?
ಸ್ವಲ್ಪ ಜಾಗರೂಕತೆ ವಹಿಸುವುದರಿಂದ ಅಪಾಯಗಳಿಂದ ಪಾರಾಗಬಹುದು. ಆದ್ದರಿಂದ ಆ್ಯಪ್ ಬುಕಿಂಗ್ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವಷ್ಟೇ ಪ್ರಯಾಣ ಮುಂದುವರಿಸಿ!
