ರಾಜ್ಯ

ಕಾಸರಗೋಡು: ಬೇವಿಂಜೆಯಲ್ಲಿ ಲಾರಿ ಪಲ್ಟಿ; ಕ್ಯಾಬಿನ್‌ನಲ್ಲಿ ಸಿಲುಕಿದ್ದ ಚಾಲಕನ ಪವಾಡಸದೃಶ ರಕ್ಷಣೆ!

 


ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸರಕು ಸಾಗಣೆ ಲಾರಿಯೊಂದು ರಸ್ತೆಗೆ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಚೆರ್ಕಳ ಸಮೀಪದ ಬೇವಿಂಜೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

​ಅಪಘಾತದ ತೀವ್ರತೆಗೆ ಲಾರಿಯ ಮುಂಭಾಗದ ಕ್ಯಾಬಿನ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಮಿಳುನಾಡು ಮೂಲದ ಚಾಲಕ ಸಿದ್ದಿಕ್ (41) ಅವರು ವಾಹನದೊಳಗೆ ಸಿಲುಕಿ ಹಾಕಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದರು.

​ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರ ರಕ್ಷಣಾ ತಂಡವು ಅತ್ಯಾಧುನಿಕ ಹೈಡ್ರಾಲಿಕ್ ಕಟ್ಟರ್ ಬಳಸಿ, ಲಾರಿಯ ಭಾಗಗಳನ್ನು ಜಾಗರೂಕತೆಯಿಂದ ಕತ್ತರಿಸುವ ಮೂಲಕ ಬಲಿಷ್ಠ ಕಾರ್ಯಾಚರಣೆ ನಡೆಸಿತು. ಸುದೀರ್ಘ ಪ್ರಯತ್ನದ ಬಳಿಕ ಚಾಲಕ ಸಿದ್ದಿಕ್ ಅವರನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು. ಅದೃಷ್ಟವಶಾತ್, ಸಿದ್ದಿಕ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪವಾಡಸದೃಶ ರೀತಿಯಲ್ಲಿ ಜೀವಪಾಯದಿಂದ ಪಾರಾಗಿದ್ದಾರೆ.


ಸಂಚಾರ ವ್ಯತ್ಯಯ:

ಅಪಘಾತದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ವಾಹನವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.



image