ಬೆಳ್ತಂಗಡಿ: ಧೀಮಂತ ಸಮಾಜಮುಖಿ ಸಂಘಟನೆಯಾದ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ, ಸಂಸ್ಥೆಯ ಕರ್ನಾಟಕ ರಾಜ್ಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ 586ನೇ ಸೇವಾ ಯೋಜನೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ತಾಲೂಕಿನ ಸರ್ಕಾರಿ ಶಾಲೆಯ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಬ್ಯಾಗ್ ವಿತರಿಸುವ ಈ ಸಾರ್ಥಕ ಕಾರ್ಯಕ್ರಮವು ಕುತ್ಯಾರು ಹೊಸಮನೆಯ ಸಪರಿವಾರ ನಾಗಬ್ರಹ್ಮಾದಿ ಕ್ಷೇತ್ರ ರೆಂಕೆದಗುತ್ತುವಿನಲ್ಲಿ ಭಾನುವಾರ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸಂಪತ್ ಬಿ. ಸುವರ್ಣ ಅವರು ಮಾತನಾಡಿ, "ರಾಜಕೇಸರಿ ಸೇವಾ ಟ್ರಸ್ಟ್ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಇಂತಹ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಟ್ರಸ್ಟ್‌ನಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ಇದ್ದರೂ ಕೂಡ, ತಮ್ಮ ಕಷ್ಟದ ನಡುವೆಯೂ ಸಮಾಜ ಸೇವೆಯನ್ನು ನಿಲ್ಲಿಸದೆ ಮುನ್ನಡೆಸುತ್ತಿರುವುದು ಶ್ಲಾಘನೀಯ. ದೇಶದ ಭವಿಷ್ಯದ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲವಾಗಿ ಈ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಮಾಡಿರುವುದು ಸಂತಸ ತಂದಿದೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ರೂಪಿಸಬೇಕು" ಎಂದು ಕರೆ ನೀಡಿದರು.
ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಿ: ಡಿವೈಎಸ್ಪಿ ರೋಹಿಣಿ ಸಿ.ಕೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರು ಮಾತನಾಡಿ, "ಕಷ್ಟದಲ್ಲಿರುವವರ ಬದುಕಿಗೆ ರಾಜ ಕೇಸರಿ ಸೇವಾ ಟ್ರಸ್ಟ್ ನಿರಂತರ ಆಸರೆಯಾಗುತ್ತಿದೆ. ನಾನು ಬೆಳ್ತಂಗಡಿಗೆ ಅಧಿಕಾರ ವಹಿಸಿಕೊಂಡು ಬಂದು ಕೆಲವೇ ದಿನಗಳಾಗಿದ್ದರೂ, ಈ ಟ್ರಸ್ಟ್‌ನ ನಿರಂತರ ಸಮಾಜಮುಖಿ ಕೆಲಸಗಳಿಂದಾಗಿ ನನಗೆ ಈ ಸಂಘಟನೆ ಚಿರಪರಿಚಿತವಾಗಿದೆ. ಪೋಷಕರು ಮಕ್ಕಳಿಗಾಗಿ ಆಸ್ತಿ ಪಾಸ್ತಿಗಳನ್ನು ಮಾಡುವ ಬದಲು, ಮಕ್ಕಳನ್ನೇ ದೇಶದ ದೊಡ್ಡ ಆಸ್ತಿಯನ್ನಾಗಿ ಬೆಳೆಸಬೇಕಿದೆ" ಎಂದು ಮಾರ್ಮಿಕವಾಗಿ ನುಡಿದರು.
350 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ
ರಾಜ ಕೇಸರಿ ಸೇವಾ ಟ್ರಸ್ಟ್‌ನ 586ನೇ ಯೋಜನೆಯ ಅಂಗವಾಗಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಂದ ಆಯ್ಕೆಯಾದ ಸುಮಾರು 350ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಉಚಿತವಾಗಿ ಬ್ಯಾಗ್ ಹಾಗೂ ಪುಸ್ತಕಗಳನ್ನು ವಿತರಿಸಿ, ಶೈಕ್ಷಣಿಕ ಪ್ರೋತ್ಸಾಹ ನೀಡಲಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಉಜಿರೆಯ ಹಳ್ಳಿಮನೆ ಹೋಟೆಲ್ ಮಾಲಕರಾದ ಪ್ರವೀಣ್ ಫೆರ್ನಾಂಡಿಸ್, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ತುಕರಾಮ್ ಬಿ., ವಿಜಯವಾಣಿ ಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ ಹಾಗೂ ರೆಂಕೆದಗುತ್ತು ಸಂಗಮ್ ಸ್ಟೋರ್ಸ್ ಮಾಲಕರಾದ ಸಿರಿಲ್ ಡಿ’ಸೋಜಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಜಗದೀಶ್ ಲಾಯಿಲ, ಜ್ಯೂಸ್ ಜಂಕ್ಷನ್ ಮಾಲಕರಾದ ದಿನೇಶ್ ಶೆಟ್ಟಿ ಹಾಗೂ ಟ್ರಸ್ಟ್‌ನ ತಾಲೂಕು ಪ್ರಧಾನ ಕಾರ್ಯದರ್ಶಿ ಶರತ್ ಕರಾಯ ಉಪಸ್ಥಿತರಿದ್ದರು.

