ಮಂಗಳೂರು:ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆಡಳಿತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ-ಗ್ರೂಪ್ ಗುತ್ತಿಗೆ ಆಧಾರಿತ ಮಹಿಳಾ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ಅವರ ವಿರುದ್ಧ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಕಚೇರಿಗೆ ದಿಢೀರ್ ಭೇಟಿ ನೀಡಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಎಪಿಎಂಸಿ ಕಚೇರಿಗೆ ತೆರಳಿದ ಮಹಿಳಾ ಹಕ್ಕುಗಳ ಹೋರಾಟಗಾರರು, ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ಅವರನ್ನು ನೇರವಾಗಿ ಭೇಟಿಯಾಗಿ ತೀವ್ರ ತರಾಟೆಗೆ ತೆಗೆದುಕೊಂಡರು. ಸಂತ್ರಸ್ತ ಮಹಿಳಾ ನೌಕರರಿಗೆ ಕೂಡಲೇ ನ್ಯಾಯ ಒದಗಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
‘ದೂರು ತಡವಾಗಿದೆ ಎಂಬ ಕಾರಣಕ್ಕೆ ನಿರ್ಲಕ್ಷಿಸದಿರಿ’
ಸಂತ್ರಸ್ತೆ ದೀರ್ಘಕಾಲ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿದ ಬಳಿಕವೇ ಧೈರ್ಯ ಮಾಡಿ ದೂರು ನೀಡಿದ್ದಾರೆ. ಆದ್ದರಿಂದ 'ದೂರು ನೀಡಲು ತಡವಾಗಿದೆ' ಎಂಬ ನೆಪ ಒಡ್ಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಬಾರದು. ಈ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ತಕ್ಷಣವೇ ಆರಂಭವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
"ಯಾವುದೇ ಮಹಿಳೆ ಸೂಕ್ತ ಕಾರಣವಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ. ತೀವ್ರ ಸಮಸ್ಯೆಗೆ ಒಳಗಾದ ಮೇಲೆಯೇ ಅವರು ಧೈರ್ಯದಿಂದ ದೂರು ನೀಡಿದ್ದಾರೆ. ಸಂತ್ರಸ್ತೆಗೆ ಸೂಕ್ತ ನ್ಯಾಯ ಸಿಗುವ ತನಕ ನಮ್ಮ ಹೋರಾಟ ವಿಶ್ರಮಿಸುವುದಿಲ್ಲ" ಎಂದು ಮಹಿಳಾ ಸಂಘಟನೆಯ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.
ಆರೋಪ ತಳ್ಳಿಹಾಕಿದ ಅಧಿಕಾರಿ:
ತಮ್ಮ ಮೇಲಿನ ಎಲ್ಲ ಲೈಂಗಿಕ ಕಿರುಕುಳ ಹಾಗೂ ಹಣಕಾಸಿನ ಆರೋಪಗಳನ್ನು ಎಪಿಎಂಸಿ ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ಸಾರಾಸಗಟಾಗಿ ನಿರಾಕರಿಸಿದ್ದಾರೆ. "ಕಚೇರಿಯ ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರ ವೇತನ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಎಲ್ಲ ಸಿಬ್ಬಂದಿಗೂ ನಿಯಮಾನುಸಾರ ಸಂಪೂರ್ಣ ವೇತನ ತಲುಪುತ್ತಿದೆ. ನಾನು ಯಾರಿಂದಲೂ ಹಣ ಪಡೆದಿಲ್ಲ, ಇವೆಲ್ಲವೂ ಆಧಾರರಹಿತ ಆರೋಪಗಳು" ಎಂದು ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಸಮಗ್ರ ತನಿಖೆಗೆ ಪಟ್ಟು:
ವೇತನ ಪಾವತಿ ಮಾತ್ರವಲ್ಲದೆ, ಹೆಚ್ಚುವರಿ ಹಣದ ಆಮಿಷ ಒಡ್ಡಿರುವುದು ಹಾಗೂ ಅನಗತ್ಯ ವೈಯಕ್ತಿಕ ಸೂಚನೆಗಳನ್ನು ನೀಡಿದ ವಿಚಾರವಾಗಿಯೂ ಆಡಳಿತ ಮಂಡಳಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಹಿಳಾ ಸಂಘಟನೆಗಳು ಪಟ್ಟು ಹಿಡಿದಿವೆ.
ಪ್ರತಿಭಟನೆಯ ವೇಳೆ ಎಪಿಎಂಸಿ ಕಚೇರಿ ಆವರಣದಲ್ಲಿ ಅಧಿಕಾರಿ ಹಾಗೂ ಮಹಿಳಾ ಸಂಘಟನೆಯ ನಾಯಕರ ನಡುವೆ ಸಣ್ಣ ಮಟ್ಟದ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೆಲಕಾಲ ಕಾವೇರಿತ್ತು.
