ಕಡಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನಾರ್ಭಟ ಹಾಗೂ ಬಿರುಗಾಳಿ ತೀವ್ರಗೊಂಡಿದ್ದು, ದುರಂತವೊಂದಕ್ಕೆ ಕಡಬ ತಾಲೂಕು ಸಾಕ್ಷಿಯಾಗಿದೆ. ತೋಟದಲ್ಲಿ ಕೆಲಸ ನಿರತರಾಗಿದ್ದ ವ್ಯಕ್ತಿಯೊಬ್ಬರ ಮೇಲೆ ಏಕಾಏಕಿ ಅಡಿಕೆ ಮರ ಮುರಿದುಬಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದ ಭೀಕರ ಘಟನೆ ಕುಂತೂರು ಗ್ರಾಮದ ಕೇವಳ ಎಂಬಲ್ಲಿ ಸಂಭವಿಸಿದೆ.
ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (66) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಶುಕ್ರವಾರದಂದು ಯಾದವ ಗೌಡ ಅವರು ತಮ್ಮ ಅಡಿಕೆ ತೋಟದಲ್ಲಿ ದೈನಂದಿನ ಕೃಷಿ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಗಾಳಿ ಸಹಿತ ಭಾರಿ ಮಳೆ ಸುರಿಯಲಾರಂಭಿಸಿದೆ. ಈ ಸಂದರ್ಭದಲ್ಲಿ ಬೀಸಿದ ರಭಸದ ಗಾಳಿಗೆ ಸಮೀಪದಲ್ಲಿದ್ದ ಅಡಿಕೆ ಮರವೊಂದು ಧರೆಗುರುಳಿ ಯಾದವ ಗೌಡ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ತಲೆ ಹಾಗೂ ದೇಹಕ್ಕೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದುರಂತದ ಸುದ್ಧಿ ತಿಳಿಯುತ್ತಿದ್ದಂತೆಯೇ ಕಡಬ ತಹಶೀಲ್ದಾರ್ ಗಣೇಶ್ ಸವಣೂರ, ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು ಹಾಗೂ ಕಡಬ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
